ಸಾರಾಂಶ
ವಿವಿಧ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳ ತಾಳಿ, ಓಲೆ ತೆಗೆಸಿದ ಪ್ರಕರಣ ಸಂಬಂಧ ಕೇಂದ್ರದ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ಕ್ಕೆ ಪತ್ರ ಬರೆಯುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬೆಂಗಳೂರು : ವಿವಿಧ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳ ತಾಳಿ, ಓಲೆ ತೆಗೆಸಿದ ಪ್ರಕರಣ ಸಂಬಂಧ ಕೇಂದ್ರದ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ಕ್ಕೆ ಪತ್ರ ಬರೆಯುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಜನಿವಾರಕ್ಕೆ ಕತ್ತರಿ, ಶಿವದಾರಕ್ಕೆ ಶಿವನಪಾದ, ತಾಳಿಗೆ ಭಾಗ್ಯ ಇಲ್ಲ. ಉಡುದಾರಕ್ಕೆ ಊರುಗೋಲಿಲ್ಲ, ಹಿಜಾಬ್‌ಗೆ ಜೈ. ಇದು ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯದಲ್ಲಿರುವ ಪರಿಸ್ಥಿತಿ. ರಾಜ್ಯದಲ್ಲಿ ಶರಿಯತ್ ಕಾನೂನು ಜಾರಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಇಟಿ ಪರೀಕ್ಷೆಯಲ್ಲಿ ಒಬ್ಬ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಎಸೆಯಲಾಗಿದೆ. ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತು ಹಾಕಿದೆ. ಲಿಂಗಾಯತರ ಶಿವದಾರವನ್ನೂ ಕತ್ತರಿಸಿದ್ದಾರೆ. ಹಿಜಾಬ್ ಬಗ್ಗೆ ಪ್ರಶ್ನೆ ಮಾಡಿದ್ದಾಗ ಅದನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದರು. ಬಟ್ಟೆಯೊಳಗೆ ಏನು ಬೇಕಾದರೂ ಬಚ್ಚಿಟ್ಟುಕೊಳ್ಳಬಹುದು. ಆದರೆ ಜನಿವಾರದಲ್ಲಿ ಏನೂ ಅಡಗಿಸಿಕೊಳ್ಳಲಾಗುವುದಿಲ್ಲ. ಇದರ ಜೊತೆಗೆ ತಾಳಿ, ಓಲೆಗೂ ಕೈ ಹಾಕಿದ್ದಾರೆ ಎಂದು ದೂರಿದರು.
ಹಿಂದೂಗಳು ಕುಂಕುಮ ಇಟ್ಟುಕೊಳ್ಳಲು, ಜನಿವಾರ ಹಾಕಿಕೊಳ್ಳಲು ಅವಕಾಶವಿಲ್ಲ. ಹಿಜಾಬ್ ಹಾಕಿಕೊಂಡವರನ್ನು ತಪಾಸಣೆ ಮಾಡುವುದಿಲ್ಲ. ಹಿಂದೂಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಪ ಇದೆ. ಈ ಸರ್ಕಾರ ಹಿಂದೂಗಳನ್ನು ಧಮನ ಮಾಡುತ್ತಿದೆ. ಈ ಮೂಲಕ ವಿಕೃತ ಸಂತೋಷ ಕಂಡುಕೊಳ್ಳುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾಡಿದರು.
ಜನಿವಾರದಲ್ಲಿ, ಹೇಗೆ ಕಾಪಿ ಹೊಡೆಯಲು ಸಾಧ್ಯ? ಶಿವದಾರದಲ್ಲಿ ಹೇಗೆ ಕಾಪಿ ಸಾಧ್ಯ? ಉಡುದಾರವನ್ನೂ ಕತ್ತರಿಸಿದ್ದಾರೆ. ತಾಳಿ ಭಾಗ್ಯವೂ ಇಲ್ಲ. ತಾಳಿಯನ್ನೂ ಕತ್ತರಿಸಿದ್ದಾರೆ. ಹೆಣ್ಣುಮಕ್ಕಳ ತಾಳಿಗೆ ಕೈಹಾಕಿದವರು ಉದ್ಧಾರ ಆಗುವುದಿಲ್ಲ. ದ್ರೌಪದಿಯ ತಲೆಗೆ ಕೈಹಾಕಿ ಕೌರವರು ನಾಶವಾದರು. ಹಾಗೆಯೇ ಕಾಂಗ್ರೆಸ್ ಸರ್ವನಾಶ ಆಗುತ್ತದೆ. ಕೇಂದ್ರದ ಮಾನವ ಹಕ್ಕು ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಕೂಡಲೇ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.