ಸರ್ಕಾರದಿಂದ ವಿವಿಗಳ ಮುಚ್ಚುವ ಭಾಗ್ಯ - ವಿದ್ಯಾರ್ಥಿಗಳು ಪಕ್ಕದ ರಾಜ್ಯಕ್ಕೆ ವಲಸೆ ಹೋಗುವ ಸ್ಥಿತಿ : ಅಶೋಕ್‌ ಆಕ್ರೋಶ

| N/A | Published : Feb 16 2025, 11:22 AM IST

R Ashok

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದು, ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಕ್ಕೆ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಭಾಗ್ಯ ನೀಡಿದ್ದು, ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಿಸಾನ್‌ ಸಮ್ಮಾನ್‌, ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳನ್ನು ಮುಚ್ಚಿ ಹಾಕಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಕಣ್ಣು ವಿಶ್ವವಿದ್ಯಾಲಯಗಳ ಮೇಲೆ ಬಿದ್ದಿದೆ. ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ. ಯಾರೂ ಪದವೀಧರರಾಗದಿದ್ದರೆ ಯುವನಿಧಿ ಯೋಜನೆ ನಿಲ್ಲಿಸಬಹುದು ಎಂಬುದು ಅವರ ಚಿಂತನೆ ಎಂದು ವಾಗ್ದಾಳಿ ನಡೆಸಿದರು.

ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಹಾಗೂ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚು ಕನ್ನಡಿಗರಿರುವ ಮಂಡ್ಯದಲ್ಲೇ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಹಾಕಲಾಗಿದೆ. ಉಪನ್ಯಾಸಕರ ನೇಮಕವಿಲ್ಲ, ಅತಿಥಿ ಉಪನ್ಯಾಸರಿಗೆ ವೇತನ ಇಲ್ಲ, ಹೊಸ ಶಿಕ್ಷಣ ನೀತಿ ಜಾರಿಯಾಗಿಲ್ಲ, ಶಾಲಾ ಕೊಠಡಿಗಳ ದುರಸ್ತಿ ಮತ್ತು ಪಠ್ಯಪುಸ್ತಕ-ಸಮವಸ್ತ್ರ ನೀಡಲು ಹಣ ಇಲ್ಲ. ಹೊಸ ಕಾಲೇಜುಗಳನ್ನು ಎಲ್ಲೂ ಆರಂಭಿಸಿಲ್ಲ. ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು ಬೇರೆ ರಾಜ್ಯಗಳ ವಿವಿಗಳಿಗೆ ವಲಸೆ ಹೋಗಲಿದ್ದಾರೆ. ಪ್ರತಿಭಾವಂತರು ಸಿಗುತ್ತಾರೆ ಎಂಬ ಕಾರಣಕ್ಕೆ ಇನ್‌ವೆಸ್ಟ್‌ ಕರ್ನಾಟಕಕ್ಕೆ ಎಲ್ಲರೂ ಬರುತ್ತಾರೆ. ವಿದ್ಯಾರ್ಥಿಗಳೇ ಇಲ್ಲವೆಂದ ಮೇಲೆ ಯಾವ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಾರೆ? ಎಂದು ಕಿಡಿಕಾರಿದರು.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಅಕ್ಕಿ ನೀಡುವ ಮೊದಲು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ನಾಲ್ಕು ಲಕ್ಷ ಕೋಟಿ ರು. ಬಜೆಟ್‌ ಮಂಡಿಸುವ ಸರ್ಕಾರಕ್ಕೆ 350 ಕೋಟಿ ರು. ಅನುದಾನ ನೀಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಕಾಂಗ್ರೆಸ್‌ ಸರ್ಕಾರಕ್ಕೆ ಶಿಕ್ಷಣಕ್ಕಿಂತ ರಿಯಲ್‌ ಎಸ್ಟೇಟ್‌ ಮುಖ್ಯ ಎಂದು ಟೀಕಾಪ್ರಹಾರ ನಡೆಸಿದರು.

ರಾಜ್ಯ ಬಿಜೆಪಿಯಿಂದ 10 ವಿಶ್ವವಿದ್ಯಾಲಯಗಳನ್ನು ರೂಪಿಸಿದಾಗ, ಇನ್ನಷ್ಟು ಹೆಚ್ಚು ವಿಶ್ವವಿದ್ಯಾಲಯಗಳನ್ನು ಮಾಡುತ್ತೇವೆಂದು ಕಾಂಗ್ರೆಸ್‌ ಹೇಳಬೇಕಿತ್ತು. ಅದನ್ನು ಬಿಟ್ಟು ಬಿಜೆಪಿ ಕಟ್ಟಿದ ಮನೆ ಒಡೆದು ಹಾಕಲು ಕಾಂಗ್ರೆಸ್‌ ಮುಂದಾಗಿದೆ. ಶಿಕ್ಷಣ ಹಾಗೂ ಆರೋಗ್ಯ ವಲಯದಲ್ಲಿ ಸರ್ಕಾರ ಆದಾಯ ನೋಡಬಾರದು ಎಂದರು.

ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಎಂಟು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರ್ಕಾರ ನಿರ್ಧಾರದಿಂದ ಪ್ರಗತಿಗೆ ಹಿನ್ನಡೆಯಾಗಲಿದೆ. ಕಾಂಗ್ರೆಸ್‌ನಿಂದ ಎಲ್ಲ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದೆ. ಈ ತೀರ್ಮಾನದಿಂದ ಯುವಜನರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ. ಸಿದ್ದರಾಮಯ್ಯ ಬಜೆಟ್‌ ಮಂಡಿಸುವಾಗ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಸಂವಿಧಾನದ ಆಶಯ, ವಚನಕಾರರ ಮಾತುಗಳನ್ನು ಹೇಳಿದ್ದರು. ಆದರೆ ಈಗ ಅವರ ಸರ್ಕಾರಾವಧಿಯಲ್ಲಿ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗುತ್ತಿದೆ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ಅರುಣ್ ಶಹಾಪುರ ಉಪಸ್ಥಿತರಿದ್ದರು.