ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಂತಹುದೇ ಪರಿಸ್ಥಿತಿ ಬಂದರೂ ಎದುರಿಸಲು ಸರ್ವ ಸನ್ನದ್ಧವಾಗಿರಬೇಕು - ಸಿದ್ದರಾಮಯ್ಯ

ಬೆಂಗಳೂರು : ‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಎಂತಹುದೇ ಪರಿಸ್ಥಿತಿ ಬಂದರೂ ಎದುರಿಸಲು ಸರ್ವ ಸನ್ನದ್ಧವಾಗಿರಬೇಕು. ವೆಂಟಿಲೇಟರ್‌, ಆಕ್ಸಿಜನ್‌, ಔಷಧ ಸೇರಿದಂತೆ ಅಗತ್ಯವಿರುವ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು. ವಿಶೇಷವಾಗಿ ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಬೇಕು ಎಂದೂ ಹೇಳಿದ್ದಾರೆ.

ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳು ಹಾಗೂ ಕೊರೋನಾ ತಾಂತ್ರಿಕ ಪಡೆಯ ತಜ್ಞರೊಂದಿಗೆ ಸೋಮವಾರ ಸಂಜೆ ತುರ್ತು ಸಭೆ ನಡೆಸಿ ಸಿಎಂ ಚರ್ಚಿಸಿದರು. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸದ್ಯಕ್ಕೆ ಅಂತಹ ತುರ್ತು ಇಲ್ಲದಿದ್ದರೂ ವೆಂಟಿಲೇಟರ್‌, ಆಕ್ಸಿಜನ್‌, ಔಷಧ ಸೇರಿ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಡ್ಡಾಯವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಹಾಗೂ ಮಾರ್ಗಸೂಚಿ ರೂಪಿಸಲು ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ 3 ದಿನಕ್ಕೊಮ್ಮೆ ಕೋವಿಡ್‌ ಕಾರ್ಯಪಡೆ ಸಭೆ ನಡೆಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿ ತೀವ್ರ ನಿಗಾ ಇಡಬೇಕು ಎಂದು ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜತೆಗೆ ನಿರ್ಲಕ್ಷ್ಯ ಧೋರಣೆ ತೋರದೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.

ವ್ಯಾಕ್ಸಿನ್‌ ಸಿದ್ಧ ಮಾಡಿಕೊಳ್ಳಿ:

ಈಗಾಗಲೇ ರಾಜ್ಯದಲ್ಲಿ ಬಹುತೇಕರು ಕೊರೋನಾ ಲಸಿಕೆ ಪಡೆದಿದ್ದಾರೆ. ಆ ಲಸಿಕೆ ರೂಪಾಂತರಿ ವೈರಾಣು ಸೋಂಕುವಿನಿಂದ ರಕ್ಷಣೆ ನೀಡುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು. ಮುನ್ನೆಚ್ಚರಿಕೆಯಾಗಿ ಅಗತ್ಯವಾದರೆ ರೂಪಾಂತರಿ ಕೊರೋನಾ ವೈರಾಣುವಿಗೆ ಸಂಬಂಧಿಸಿದಂತೆ ಲಸಿಕೆ ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ಜನವರಿಯಿಂದಲೂ ಕೋವಿಡ್‌ ಪ್ರಕರಣ ಒಂದೆರಡರಂತೆ ಕಂಡು ಬರುತ್ತಿತ್ತು. ಮೇ ತಿಂಗಳಲ್ಲಿ ಉಲ್ಬಣವಾಗಿದ್ದು ಮೇ ತಿಂಗಳ ನಾಲ್ಕನೇ ವಾರಕ್ಕೆ ಬರೋಬ್ಬರಿ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ. ಜತೆಗೆ ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳುನಾಡಿನಲ್ಲಿ 66, ಮಹಾರಾಷ್ಟ್ರಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ವಹಿಸಿ:

ಗರ್ಭಿಣಿಯರು, ಬಾಣಂತಿ ಹಾಗೂ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ವಿಶೇಷವಾಗಿ ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಬೇಕು. ಹೀಗಾಗಿ ಅಗತ್ಯ ಚಿಕಿತ್ಸೆ ಎಲ್ಲಾ ಆಸ್ಪತ್ರೆಗಳಲ್ಲೂ ಲಭ್ಯವಾಗುವಂತೆ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಸ್ಕ್‌ ಧರಿಸಲು ಜಾಗೃತಿ ಮೂಡಿಸಿ:

ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಮಾಹಿತಿ ನೀಡಿ. ಅನಗತ್ಯ ಗೊಂದಲ ಹಾಗೂ ಆತಂಕ ಉಂಟಾಗದಂತೆ ಎಲ್ಲರೂ ಒಟ್ಟಾಗಿ ಕೋವಿಡ್‌ ವಿರುದ್ಧ ಹೋರಾಡಲು ಜನರನ್ನು ಜಾಗೃತಗೊಳಿಸಿ ಎಂದು ನಿರ್ದೇಶಿಸಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್ ಪಾಟೀಲ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್‌ ಸೇರಿದಂತೆ ಹಲವರು ಹಾಜರಿದ್ದರು.

ಅಗತ್ಯ ಬಂದರೆ ಏರ್ಪೋರ್ಟ್‌ನಲ್ಲಿ ಪರೀಕ್ಷೆ:

ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ಕೋವಿಡ್‌ ತಪಾಸಣಾ ಘಟಕಗಳನ್ನು ಪ್ರಾರಂಭಿಸಲು ಕ್ರಮ ವಹಿಸಬೇಕು. ಕೋವಿಡ್‌ ಪ್ರಕರಣಗಳು ಪ್ರವಾಸ ಹಿನ್ನೆಲೆ ಉಳ್ಳವರಿಂದ ಹೆಚ್ಚಾಗಿ ವರದಿಯಾಗುತ್ತಿದ್ದರೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕೋವಿಡ್‌ ಸೂಚನೆಗಳು

- ಎಂತಹುದೇ ಪರಿಸ್ಥಿತಿ ಬಂದರೂ ಎದುರಿಸಲು ಸನ್ನದ್ಧರಾಗಿರಬೇಕು

- ವೆಂಟಿಲೇಟರ್‌, ಆಕ್ಸಿಜನ್‌, ಔಷಧ, ಲಸಿಕೆ ಎಲ್ಲವೂ ಸಿದ್ಧವಾಗಿರಬೇಕು

- ಸಾರ್ವಜನಿಕರಿಗಾಗಿ ವಿಶೇಷ ಕೋವಿಡ್‌ ಸಹಾಯವಾಣಿ ಸ್ಥಾಪಿಸಬೇಕು.

- ವೃದ್ಧರು, ಗರ್ಭಿಣಿಯರು, ಅನಾರೋಗ್ಯಪೀಡಿತರು ಮಾಸ್ಕ್‌ ಧರಿಸಬೇಕು

- ಏರ್‌ಪೋರ್ಟ್‌ಗಳಲ್ಲಿ ಕೋವಿಡ್‌ ತಪಾಸಣೆಗೆ ಕ್ರಮ ಜರುಗಿಸಬೇಕು

- ರಾಜ್ಯದಲ್ಲಿ ನಿತ್ಯ 200 ಕೋವಿಡ್‌ ಟೆಸ್ಟ್ ನಡೆಸಲು ಕ್ರಮ ವಹಿಸಬೇಕು

- ಆರೋಗ್ಯ ಸಿಬ್ಬಂದಿ ರಜೆ ಪಡೆಯದೇ ಆಸ್ಪತ್ರೆಗಳಲ್ಲಿ ಕೆಲಸ ಮಾಡಬೇಕು

- ಕೋವಿಡ್ ಕಾರ್ಯಪಡೆ 3 ದಿನಕ್ಕೊಮ್ಮೆ ಸಭೆ ಮಾಡಿ ಪರಿಶೀಲಿಸಬೇಕು