ನಟಿ ರನ್ಯಾ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಪ್ರಖ್ಯಾತ ಹೋಟೆಲ್‌ ಉದ್ಯಮಿಯೊಬ್ಬರ ಮೊಮ್ಮಗನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗ‍ಳು ಬಂಧಿಸಿದ್ದಾರೆ.

ಬೆಂಗಳೂರು : ನಟಿ ರನ್ಯಾ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಪ್ರಖ್ಯಾತ ಹೋಟೆಲ್‌ ಉದ್ಯಮಿಯೊಬ್ಬರ ಮೊಮ್ಮಗನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗ‍ಳು ಬಂಧಿಸಿದ್ದಾರೆ.

ಅರಮನೆ ರಸ್ತೆಯಲ್ಲಿರುವ ಏಟ್ರಿಯಾ ಹೋಟೆಲ್‌ (ರ್‍ಯಾಡಿಸನ್ ಬ್ಲೂ) ಮಾಲೀಕರ ಮೊಮ್ಮಗ ತರುಣ್ ರಾಜು ಬಂಧಿತನಾಗಿದ್ದು, ಆತನಿಂದ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಸಹ ಜಪ್ತಿಯಾಗಿದೆ.

ನಟಿ ರನ್ಯಾ ಮೊಬೈಲ್‌ ಸಂಪರ್ಕ ಜಾಲವನ್ನು ಶೋಧಿಸಿದಾಗ ತರುಣ್ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕೃತ್ಯದ ಪ್ರಮುಖ ಸಂಚುಕೋರ ಎಂಬ ಆರೋಪದ ಮೇರೆಗೆ ಆತನನ್ನು ಡಿಆರ್‌ಐ ಬಂಧಿಸಿದೆ ಎಂದು ತಿಳಿದು ಬಂದಿದೆ.

ನಗರದ ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯದ ಮುಂದೆ ತರುಣ್‌ನನ್ನು ಡಿಆರ್‌ಐ ಅಧಿಕಾರಿಗಳು ಹಾಜರುಪಡಿಸಿದರು. ಹೆಚ್ಚಿನ ತನಿಖೆ ಸಲುವಾಗಿ ವಶಕ್ಕೆ ನೀಡುವಂತೆ ಡಿಆರ್‌ಐ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಯನ್ನು ಐದು ದಿನ ಡಿಆರ್‌ಐ ವಶಕ್ಕೆ ನೀಡಿ ಆದೇಶಿಸಿತು.

ತರುಣ್ ಜತೆ ಆತ್ಮೀಯ ಒಡನಾಟ:

ಹಲವು ವರ್ಷಗಳಿಂದ ತರುಣ್ ಜತೆ ರನ್ಯಾಗೆ ಒಡನಾಟವಿದ್ದು, ಇಬ್ಬರೂ ‘ಆತ್ಮೀಯ’ ಸ್ನೇಹಿತರಾಗಿದ್ದರು. ಈ ಸ್ನೇಹದಲ್ಲೇ ವಿದೇಶದಿಂದ ಚಿನ್ನ ಸ್ಮಗ್ಲಿಂಗ್‌ನಲ್ಲಿ ರನ್ಯಾ ಹಾಗೂ ತರುಣ್ ಕೈ ಜೋಡಿಸಿದ್ದರು. ಈ ಜಾಲದಲ್ಲಿ ಮತ್ತಷ್ಟು ರಾಜಕಾರಣಿಗಳು ಮತ್ತು ಉದ್ಯಮಿಗಳ ಮಕ್ಕಳು ಪಾಲ್ಗೊಂಡಿರುವ ಶಂಕೆ ಇದೆ ಎಂದು ಮೂಲಗಳು ಮಾಹಿತಿ ನೀಡಿವೆ.

ತರುಣ್ ಜತೆ ರನ್ಯಾಗೆ ಆಪ್ತ ಸ್ನೇಹವಿತ್ತು. ಆದರೆ ವಾಸ್ತು ಶಿಲ್ಪಿ ಜತಿನ್ ಹುಕ್ಕೇರಿ ಜತೆ ವಿವಾಹವಾದ ನಂತರ ಈ ಗೆಳೆಯರು ದೂರ ಸರಿದಿದ್ದರು. ಆದರೆ ಚಿನ್ನ ಕಳ್ಳ ಸಾಗಾಣಿಕೆ ವ್ಯವಹಾರವನ್ನು ಅವರು ಮುಂದುವರೆಸಿದ್ದರು. ದುಬೈನಿಂದ ಚಿನ್ನ ತೆಗೆದುಕೊಂಡು ಅಲ್ಲಿಂದ ಹೊರಟಾಗ ತರುಣ್‌ಗೆ ಅವರು ಕರೆ ಮಾಡಿದ್ದರು. ಈ ಕರೆ ಕುರಿತು ಮಾಹಿತಿ ಕೆದಕಿದಾಗ ಚಿನ್ನ ಸಾಗಾಣಿಕೆ ಕೃತ್ಯದ ಸಂಚಿನಲ್ಲಿ ತರುಣ್ ಪ್ರಮುಖ ಪಾತ್ರ ವಹಿಸಿರುವುದು ಗೊತ್ತಾಗಿದೆ ಎಂದು ತಿಳಿದು ಬಂದಿದೆ.

ಎರಡು ದಿನಗಳ ಹಿಂದೆಯೇ ರನ್ಯಾ ತಮ್ಮ ವಶದಲ್ಲಿದ್ದಾಗಲೇ ತರುಣ್‌ನನ್ನೂ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಒಂದು ಹಂತದಲ್ಲಿ ಅವರಿಬ್ಬರನ್ನೂ ಮುಖಾಮುಖಿಯಾಗಿಸಿ ಕೂಡ ಡಿಆರ್‌ಐ ವಿಚಾರಣೆ ನಡೆಸಿ ಹೇಳಿಕೆ ಪಡೆದಿದೆ ಎನ್ನಲಾಗಿದೆ.