ಸಾರಾಂಶ
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಈ ಬಾರಿಯ ಭಾರ್ಗವ ಭೂಷಣ ಪ್ರಶಸ್ತಿಗೆ ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್’ನ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ಶ್ರೀಧರ್ ಸೇರಿ ವಿವಿಧ ಕ್ಷೇತ್ರಗಳ ಏಳು ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರು : ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಈ ಬಾರಿಯ ಭಾರ್ಗವ ಭೂಷಣ ಪ್ರಶಸ್ತಿಗೆ ‘ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್’ನ ಪ್ರಧಾನ ಸಂಪಾದಕ ರವಿ ಹೆಗಡೆ, ನಟ ಶ್ರೀಧರ್ ಸೇರಿ ವಿವಿಧ ಕ್ಷೇತ್ರಗಳ ಏಳು ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲ ಗಣ್ಯರಿಗೆ ಶನಿವಾರ (ಡಿ.7) ಬಸವನಗುಡಿಯ ಗಾಯನ ಸಮಾಜದಲ್ಲಿ ನಡೆಯುವ ‘ಬೃಹತ್ ವಿಪ್ರೋತ್ಸವ 2024’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿರುವ ಮಹಾಸಂಘದ ರಾಜ್ಯಾಧ್ಯಕ್ಷ ಜೆ.ಆರ್.ಪ್ರದೀಪ್ ಅವರು, ರವಿ ಹೆಗಡೆ, ನಟ ಶ್ರೀಧರ್ ಅವರ ಜೊತೆಗೆ ಹಿರಿಯ ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ, ವೈದ್ಯರಾದ ಡಾ.ಬಿ.ಎಸ್.ಶ್ರೀನಾಥ್, ಡಾ.ಸುಧೀರ್ ಹೆಗಡೆ, ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಪಂಡಿತ್ ಸತ್ಯಧ್ಯಾನ ಆಚಾರ್ಯ ಕಟ್ಟಿ ಹಾಗೂ ಉದ್ಯಮಿ ಶೈಲೇಂದ್ರ ಶರ್ಮಾ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ಎಲ್ಲ ಸಾಧಕರಿಗೆ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಗೋವಿಂದ ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಮಾಜದ ವಿವಿಧ ಸಾಧಕರು ಹಾಗೂ ಮಹಾಸಂಘದ ರಾಜ್ಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಶಸ್ತಿ ಪ್ರದಾನಕ್ಕೂ ಮುನ್ನ ಮಧ್ಯಾಹ್ನ 3 ಗಂಟೆಗೆ ಭಜನಾ ಮಂಡಳಿಗಳಿಂದ ಭಕ್ತಿಸಾರ ಕಾರ್ಯಕ್ರಮ, 4 ಗಂಟೆಗೆ ವಿಧುಷಿ ಮೇಘಾ ಶಿವಕುಮಾರ್ ಹಾಗೂ ತಂಡದಿಂದ ದಾಸರವಾಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದ ಸಮಸ್ತ ಜನತೆಗೆ ಜ್ಞಾನದಾನ, ಪೂಜಾ ವಿಧಾನ, ಧಾರ್ಮಿಕ ವಿಧಿ ಸಂಸ್ಕಾರ ಶಿಕ್ಷಣ ಒದಗಿಸಿ ಕೊಡುವ ಕೆಲಸದಲ್ಲಿ ಕಾರ್ಯೋನ್ಮುಖವಾಗಿರುವ ಬ್ರಾಹ್ಮಣ ಸಮಾಜ ಎಲ್ಲಾ ವರ್ಗಗಳಲ್ಲಿ ಶ್ರದ್ಧೆ-ನಂಬಿಕೆಗಳನ್ನು ಪುನರುತ್ಥಾನಗೊಳಿಸುವ ಗುರುತರವಾದ ಕಾರ್ಯಗಳನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಹಾಸಂಘ ಕಾರ್ಯನಿರ್ವಹಿಸುತ್ತಿದೆ.
ಜತೆಗೆ ಬ್ರಾಹ್ಮಣ ಸಮುದಾಯದ ಸಂಘಟನೆ ಹಾಗೂ ಸಮಾಜದ ಜನರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಬೆಳವಣಿಗೆ ಸಾಧಿಸಲು ಅಗತ್ಯ ಸಹಕಾರ, ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಈ ಸಮಾರಂಭದಲ್ಲಿ ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳ ಕುರಿತು ಗಂಭೀರ ಚಿಂತನೆಗಳು ನಡೆಯಲಿದ್ದು, ಈ ಚಿಂತನಾ ಸಭೆಗೆ ರಾಜ್ಯದ ಸಮಸ್ತ ಬ್ರಾಹ್ಮಣ ಬಾಂಧವರು ಆಗಮಿಸಿ ಬಲಿಷ್ಠ ಸಮಾಜದ ಸಂಘಟನೆಗೆ ಸಾಕ್ಷಿಯಾಗಬೇಕು ಎಂದು ಪ್ರದೀಪ್ ಕರೆ ನೀಡಿದ್ದಾರೆ.
;Resize=(690,390))
)
)
;Resize=(128,128))
;Resize=(128,128))
;Resize=(128,128))