ಸಾರಾಂಶ
ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳ ಜೋಡಣೆ ಅಗತ್ಯವಾಗಿದ್ದು, ನೀರಾವರಿ ಯೋಜನೆಯಲ್ಲಿ ರಾಜ್ಯಕ್ಕೆ 25 ಟಿಎಂಸಿ ನೀರು ಹಂಚಿಕೆ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರು : ಗೋದಾವರಿ, ಕೃಷ್ಣ ಮತ್ತು ಕಾವೇರಿ ನದಿಗಳ ಜೋಡಣೆ ಅಗತ್ಯವಾಗಿದ್ದು, ನೀರಾವರಿ ಯೋಜನೆಯಲ್ಲಿ ರಾಜ್ಯಕ್ಕೆ 25 ಟಿಎಂಸಿ ನೀರು ಹಂಚಿಕೆ ವಿಚಾರದಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 25 ಟಿಎಂಸಿ ನೀರು ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಂಸದರ ಜತೆಗೂಡಿ ಹೋರಾಟ ನಡೆಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ನಾಡಿನ ವಿಷಯ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕು. ಇಂಥ ಸಂಘಟಿತ ಪ್ರಯತ್ನಕ್ಕೆ ನಾನು ಹಿಂಜರಿಯುವುದಿಲ್ಲ ಎಂದು ಹೇಳಿದರು.
ನೀರಾವರಿ ಯೋಜನೆಗಳ ಜಾರಿ ವಿಷಯದಲ್ಲಿ ಜೆಡಿಎಸ್ ಸುಮ್ಮನೆ ಕೂರುವುದಿಲ್ಲ. ನದಿ ಜೋಡಣೆ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ. ಕಾಂಗ್ರೆಸ್ ಹಲವು ನೀರಾವರಿ ಯೋಜನೆಗಳನ್ನು ಮಾಡಿದರೂ ಅನುಷ್ಠಾನಕ್ಕೆ ಅನುದಾನ ಇಡಲಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಕಾವೇರಿ ನೀರು ಸದ್ವಿನಿಯೋಗ ಮಾಡಿಕೊಳ್ಳಲು ನಾನೇನು ಮಾಡಿದ್ದೇನೆ ಎನ್ನುವುದಕ್ಕೆ ದೊಡ್ಡ ಇತಿಹಾಸ ಇದೆ. ಭದ್ರಾ ಮೇಲ್ದಂಡೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ ಎಂದು ನುಡಿದರು.
ತ.ನಾಡು ವಿರೋಧ ಮಾಡಿಲ್ಲ:
ತಮಿಳುನಾಡಿಗೆ ನೀರಿನ ಸಮಸ್ಯೆ ಇಲ್ಲ. ಯಥೇಚ್ಚವಾಗಿ ನೀರು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಸಂಸತ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ತಮಿಳುನಾಡಿನವರು ವಿರೋಧ ಮಾಡಲಿಲ್ಲ. ಗೋದಾವರಿ-ಕಾವೇರಿ ಜೋಡಣೆ ಕುರಿತು ಸಂಸತ್‌ನಲ್ಲಿ ಮಾತನಾಡಿದ್ದೇನೆ. ನಾನು ನೀರಾವರಿ ಸಚಿವನಾಗಿದ್ದನಿಂದಲೂ ಹೋರಾಟ ನಡೆಯುತ್ತಲೇ ಇದೆ. ರಾಜ್ಯಕ್ಕೆ ನೀರಿನ ವಿಷಯದಲ್ಲಿ ನ್ಯಾಯ ಸಿಗಬೇಕು. ಅದೇ ನನ್ನ ಜೀವನದ ಕೊನೆಯ ಆಸೆ. ಈ ದೇಹ ಅಂತ್ಯವಾಗುವುದರೊಳಗೆ ನಮ್ಮ ರಾಜ್ಯಕ್ಕೆ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯ ಸರಿ ಹೋಗಬೇಕು ಎಂದು ಭಾವುಕರಾಗಿ ಹೇಳಿದರು.
ಪಕ್ಷದ ಭೇದ ಮರೆತು ಹೋರಾಟ:
ಮಹದಾಯಿ ನದಿ ನೀರು ವಿಚಾರದಲ್ಲಿ ರಾಜ್ಯದ ಎಲ್ಲಾ ಪಕ್ಷದವರು ಪಕ್ಷ ಮರೆತು ಹೋರಾಟ ಮಾಡಬೇಕಿದೆ. ರಾಜ್ಯಕ್ಕೆ ಆದ ಅನ್ಯಾಯ ಸರಿಪಡಿಸಲು ಶಕ್ತಿಮೀರಿ ಹೋರಾಟ ಮಾಡಬೇಕಿದೆ. ಮಹದಾಯಿ ಯೋಜನೆ ವಿವಾದ ನ್ಯಾಯಾಲಯದಲ್ಲಿದೆ. ಕಳಸಾ ಬಂಡೂರಿಯಿಂದ 3.5 ಟಿಎಂಸಿ ನೀರು ಬಿಡಲು ಗೋವಾ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ಪ್ರತಿಭಟನೆ ಅರ್ಜಿ ಹಾಕಿದೆ. ವಿವಾದ ಕೋರ್ಟ್ನಲ್ಲಿರುವಾಗ ಪ್ರಧಾನಿ ಏನು ಮಾಡಲು ಸಾಧ್ಯ? ರಾಜ್ಯದವರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ಸಿಕ್ಕಿಲ್ಲ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಮೊದಲು ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಅನೇಕ ನೀರಾವರಿ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ, ಅನುದಾನ ನೀಡಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಮೊದಲು ತನ್ನ ಕೆಲಸ ಮಾಡಲಿ ಎಂದು ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು, ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಜವರಾಯಿ ಗೌಡ ಇತರರು ಉಪಸ್ಥಿತರಿದ್ದರು.