ಸಾರಾಂಶ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಒಂದೂವರೆ ಸಾವಿರ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.
ಬೆಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಒಂದೂವರೆ ಸಾವಿರ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ.
1,205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ಎಎನ್‌ಎಂ) ಮತ್ತು 300 ಆರೋಗ್ಯ ನಿರೀಕ್ಷಣಾಧಿಕಾರಿ (ಎಚ್‌ಐಒ) ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಸಹಮತಿಯನ್ನು ಪಡೆಯಲಾಗಿದ್ದು, ಕೆಪಿಎಸ್‌ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ನಡೆಯಲಿದೆ.
ಆರಂಭದಲ್ಲಿ ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬಹುದು. ಈ ಮೂಲಕ ಕಾಯಂ ನೇಮಕಾತಿ ಸಂದರ್ಭದಲ್ಲಿ ಕಾನೂನು ತೊಡಕುಗಳು ಎದುರಾಗದಂತೆ ಎಚ್ಚರ ವಹಿಸಬೇಕು. ಕಾಯಂ ನೇಮಕಾತಿ ಸಂದರ್ಭದಲ್ಲಿ ಗುತ್ತಿಗೆ ನೌಕರಿ ಸೇವೆಯನ್ನು ಪರಿಗಣಿಸದೆ, ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಬೇಕು ಎಂದು ಸೂಚಿಸಲಾಗಿದೆ.
ಅರ್ಜಿ ಆಹ್ವಾನಿಸಿದಾಗ ಸಂಭವನೀಯ ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ ಪಡೆಯಲು ಹಾಲಿ ಇರುವ ಅರ್ಹತೆಗಳನ್ನು ಪರಿಷ್ಕರಿಸಬೇಕು. ಅಂದರೆ ಡಿಪ್ಲೋಮಾ ಇನ್ ಜನರಲ್ ನರ್ಸಿಂಗ್ ಆ್ಯಂಡ್ ಮಿಡ್‌ವೈಫರಿ ಮತ್ತು ಪದವಿ ಕೋರ್ಸ್‌ಗಳನ್ನು ಸೇರಿಸಬೇಕು. ನೇಮಕಾತಿ ನಿಯಮಗಳ ಪರಿಷ್ಕರಣೆಗೆ ತ್ವರಿತವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಇಲಾಖೆಯ ಆಯುಕ್ತರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಲ್ಯಾಣ ಕರ್ನಾಟಕ ವೃಂದದ 877 ಹುದ್ದೆಗಳು ಸೇರಿ ಆರೋಗ್ಯ ಇಲಾಖೆಯಲ್ಲಿ ಒಟ್ಟು 9,771 ಹುದ್ದೆಗಳು ಖಾಲಿ ಇವೆ. ಎಎನ್‌ಎಂ, ಎಚ್‌ಐಒ, ಶುಶ್ರೂಷಾಧಿಕಾರಿ, ಫಾರ್ಮಸಿ ಅಧಿಕಾರಿ, ಪ್ರಯೋಗ ಶಾಲೆ ತಾಂತ್ರಿಕ ಅಧಿಕಾರಿ ಹುದ್ದೆಗಳು ಗರಿಷ್ಠ ಸಂಖ್ಯೆಯಲ್ಲಿ ಖಾಲಿ ಇವೆ.