ಸಾರಾಂಶ
ಜಿಲ್ಲೆಯ ಶಹಾಪುರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಕ್ಕಳು ಬಿಸಿಯೂಟ ಮಾಡಿದ ತಟ್ಟೆ ತೊಳೆಯಲು ನಿರಾಕರಿಸಿದ್ದ ಅಡುಗೆ ಸಹಾಯಕಿಯರನ್ನು ಸೋಮವಾರ ಬದಲಾಯಿಸಲಾಗಿದೆ.
ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಕ್ಕಳು ಬಿಸಿಯೂಟ ಮಾಡಿದ ತಟ್ಟೆ ತೊಳೆಯಲು ನಿರಾಕರಿಸಿದ್ದ ಅಡುಗೆ ಸಹಾಯಕಿಯರನ್ನು ಸೋಮವಾರ ಬದಲಾಯಿಸಲಾಗಿದೆ.
ತಟ್ಟೆ ತೊಳೆಯಲು ನಿರಾಕರಿಸಿದ ಹಿನ್ನೆಲೆ ಮಧ್ಯಾಹ್ನ ಬಿಸಿಯೂಟ ಸ್ಥಗಿತಗೊಂಡ ಪ್ರಕರಣ ಕುರಿತು ಸೋಮವಾರ ‘ಕನ್ನಡಪ್ರಭ’ದಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದೆ.
ಜಿಲ್ಲಾಧಿಕಾರಿ ಡಾ। ಸುಶೀಲಾ ಅವರು ಘಟನೆ ವರದಿ ತರಿಸಿಕೊಂಡು ಸಮಸ್ಯೆ ಪರಿಹಾರಕ್ಕೆ ಮುಂದಾದರು. ಸುರಪುರ ಡಿವೈಎಸ್ಪಿ ಜಾವೀದ್ ಇನಾಂದಾರ್, ಸರ್ಕಲ್ ಇನ್‌ಸ್ಪೆಕ್ಟರ್ ಶರಣಗೌಡ ನ್ಯಾಮಣ್ಣೋರ್, ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ಇತರ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿದ್ದಾರೆ. ತಟ್ಟೆ ತೊಳೆಯಲು ನಿರಾಕರಿಸಿದ ಅಡುಗೆ ಸಹಾಯಕಿ ಬದಲಾಯಿಸಿ, ತಾತ್ಕಾಲಿಕವಾಗಿ ಅಲ್ಲಿ ಅಡುಗೆ ಮಾಡಲಿಕ್ಕಿದ್ದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸೋಮವಾರ ಎಲ್ಲ ಮಕ್ಕಳೂ ಬಿಸಿಯೂಟ ಮಾಡಿದ್ದಾರೆ ಎಂದು ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ತಿಳಿಸಿದ್ದಾರೆ.