ಸಾರಾಂಶ
‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಭಾರತೀಯ ತಾಲಿಬಾನ್’ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.
ನವದೆಹಲಿ: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಭಾರತೀಯ ತಾಲಿಬಾನ್’ ಎಂದು ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.
ಇದಕ್ಕೆ ಬಿಜೆಪಿ ಕಿಡಿಕಾರಿದ್ದು, ‘ಕಾಂಗ್ರೆಸ್ ಪ್ರತಿ ರಾಷ್ಟ್ರೀಯವಾದಿ ಸಂಘಟನೆಯನ್ನು ನಿಷೇಧಿಸುತ್ತದೆ. ಆದರೆ ಮೂಲಭೂತ ಸಂಘಟನೆಗಳಾದ ನಿಷೇಧಿತ ಪಿಎಫ್‌ಐ, ಸಿಮಿಗಳ ಮೇಲೆ ಪ್ರೀತಿ ಅತೀವ ತೋರಿಸುತ್ತದೆ’ ಎಂದು ತಿರುಗೇಟು ನೀಡಿದೆ.
ಸುದ್ದಿಸಂಸ್ಥೆ ಜತೆ ಮಾತನಾಡಿದ ಹರಿಪ್ರಸಾದ್, ‘ಮೋದಿ ಸ್ವಾತಂತ್ರ್ಯ ದಿನಾಚರಣೆ ದಿನ ಆರ್‌ಎಸ್‌ಎಸ್ ಹೊಗಳಿದ್ದನ್ನು ಟೀಕಿಸುವ ಭರದಲ್ಲಿ, ‘ದೇಶದಲ್ಲಿ ಆರ್‌ಎಸ್‌ಎಸ್ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಅವರು ಭಾರತದ ತಾಲಿಬಾನಿಗಳು. ಆದರೆ ಅಂಥವರನ್ನು ಮೋದಿ ಕೆಂಪುಕೋಟೆಯಲ್ಲಿ ಹೊಗಳುತ್ತಾರೆ’ ಎಂದರು.
ಇದಕ್ಕೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ಗಾಂಧಿ ಕುಟುಂಬ ಪಾಕ್ ಪ್ರೇಮ ಪ್ರದರ್ಶಿಸಿ ಬಿಜೆಪಿಯನ್ನು ದ್ವೇಷಿಸುತ್ತದೆ. ಅದರ ಆಪ್ತ ಸಹಾಯಕ ಬಿ.ಕೆ.ಹರಿಪ್ರಸಾದ್, ಈಗ ಆರ್‌ಎಸ್‌ಎಸ್‌ನಲ್ಲಿ ತಾಲಿಬಾನಿಗಳನ್ನು ನೋಡುತ್ತಾರೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನ, ಸಿಮಿ ಮತ್ತು ಇತರ ಉಗ್ರ ಸಂಘಟನೆಗಳಲ್ಲಿ ತನ್ನ ಸೋದರರನ್ನು ನೋಡುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
‘ಸೇನೆ, ಸಾಂವಿಧಾನಿಕ ಸಂಸ್ಥೆ, ಸಮಾಜಸೇವಾ ಸಂಸ್ಥೆಗಳು, ಸನಾತನವನ್ನು ಅನುಮಾನಿಸುವುದೇ ಕಾಂಗ್ರೆಸ್ ಚಾಳಿ. ಕಾಂಗ್ರೆಸ್‌ನದ್ದೇ ತಾಲಿಬಾನಿ ಮನಃಸ್ಥಿತಿ. ಮಹಾತ್ಮ ಗಾಂಧಿ, ಜಯಪ್ರಕಾಶ್ ನಾರಾಯಣ್ ಅವರು ಆರ್‌ಎಸ್‌ಎಸ್ ಅನ್ನು ಏಕೆ ಹೊಗಳುತ್ತಿದ್ದರು? ಪ್ರಣಬ್ ಮುಖರ್ಜಿ ಏಕೆ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು?’ ಎಂದೂ ಪೂನಾವಾಲಾ ಪ್ರಶ್ನಿಸಿದ್ದಾರೆ.