ದಿನಬೆಳಗಾದ್ರೆ ಸಿದ್ದು ಹೆಸರು ದುರ್ಬಳಕೆ ಮಾಡಬೇಡಿ- ಅವರು ನಮ್ಮ ನಾಯಕ :ಡಿ.ಕೆ.ಶಿವಕುಮಾರ್‌

| N/A | Published : Feb 17 2025, 07:00 AM IST

dk shivakumar

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಸ್ಥಳೀಯ ಸಂಸ್ಥೆಗಳಿಂದ ಸಂಸತ್‌ ಚುನಾವಣೆವರೆಗೆ ಮುಂದಿನ ಎಲ್ಲಾ ಚುನಾವಣೆಗಳಿಗೂ ಅವರು ಬೇಕೇ ಬೇಕು

 ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ಸ್ಥಳೀಯ ಸಂಸ್ಥೆಗಳಿಂದ ಸಂಸತ್‌ ಚುನಾವಣೆವರೆಗೆ ಮುಂದಿನ ಎಲ್ಲಾ ಚುನಾವಣೆಗಳಿಗೂ ಅವರು ಬೇಕೇ ಬೇಕು. ಆದರೆ ದಿನಬೆಳಗಾದರೆ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀಕ್ಷ್ಣವಾಗಿ ಹೇಳಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಂದಿನ ಚುನಾವಣೆಗೂ ಸಿದ್ದರಾಮಯ್ಯ ಅವರು ಬೇಕೆ ಬೇಕು ಎಂಬ ಕೆಲ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಅವರು ಎಲ್ಲಾ ಚುನಾವಣೆಗೂ ಬೇಕು. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯ್ತಿ, ವಿಧಾನ ಸಭೆ, ಸಂಸತ್ ಚುನಾವಣೆ ಎಲ್ಲದಕ್ಕೂ ಬೇಕು. ಅದರಲ್ಲಿ ಎರಡನೇ ಪ್ರಶ್ನೆಯೇ ಇಲ್ಲ. ಅವರನ್ನು ಪಕ್ಷ ಎರಡು ಬಾರಿ ಮುಖ್ಯಮಂತ್ರಿ ಮಾಡಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿ ಉತ್ತಮ ಕೆಲಸ ಮಾಡುತ್ತಿದ್ದು, ದಿನ ಬೆಳಗಾದರೆ ಅವರ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಅಥವಾ ಅವರ ಹೆಸರು ಮಾಧ್ಯಮಗಳಿಗೆ ಆಹಾರವಾಗುವಂತೆ ಗೊಂದಲದ ಹೇಳಿಕೆ ಬೇಡ ಎಂದು ತಿಳಿಸಿದರು.

ಪಕ್ಷದಲ್ಲಿ ಗೊಂದಲದ ಹೇಳಿಕೆ ಯಾಕೆ ಎಂದು ಕೇಳಿದಾಗ, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಕಾಂಗ್ರೆಸ್ ಪಕ್ಷ ದಿನ ನಿತ್ಯ ಎಲ್ಲವನ್ನೂ ಗಮನಿಸುತ್ತಿದೆ ಎಂದಷ್ಟೇ ಹೇಳಿದರು.

 ಚುನಾವಣೆಗಳಿಗೆ ಕಾಂಗ್ರೆಸ್​ ಸಿದ್ಧತೆ 

ಪಕ್ಷದ ಚುನಾವಣಾ ಸಿದ್ಧತೆ ಬಗ್ಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ನ್ಯಾಯಾಲಯದ ಸಲಹೆ, ಸೂಚನೆಗಾಗಿ ಕಾಯುತ್ತಿದ್ದೇವೆ. ಬೃಹತ್ ಬೆಂಗಳೂರು ಚುನಾವಣೆಗೂ ತಯಾರಿ ನಡೆಸಿದ್ದೇವೆ. ಸಾರ್ವಜನಿಕರ‌ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಅದಕ್ಕೆ‌ ನಾವೂ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಇನ್ನು ಜಿಪಂ, ತಾಪಂ ಹಾಗೂ ಪಾಲಿಕೆ ಚುನಾವಣೆಗೆ ಸಮಿತಿ ರಚನೆ ಮಾಡುತ್ತಿದ್ದೇನೆ. ಮಾರ್ಚ್ ತಿಂಗಳೊಳಗೆ ಪ್ರವಾಸ ಮಾಡಿ ಎಲ್ಲೆಲ್ಲಿ ಸಿದ್ಧತೆ, ಹೊಂದಾಣಿಕೆ ಹಾಗೂ ಮೀಸಲಾತಿ ಹಂಚಿಕೆ ಬಗ್ಗೆ ವರದಿ ಸಲ್ಲಿಸಬೇಕು ಎಂಬ ಕುರಿತು ಜವಾಬ್ದಾರಿ ಹಂಚುತ್ತಿದ್ದೇನೆ ಎಂದರು.

 104 ಕಚೇರಿ ಕಟ್ಟಲು ಮುಂದೆ ಬಂದಿದ್ದಾರೆ:  

 ಮುಖಂಡರು, ಕಾರ್ಯಕರ್ತರು  104 ಕಾಂಗ್ರೆಸ್‌ ಕಚೇರಿ ಕಟ್ಟಲು ಮುಂದೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಗೂ ಸಮಿತಿ ರಚನೆ‌ ಮಾಡಿದ್ದೇವೆ. ಕಾಂಗ್ರೆಸ್ ಹೆಸರಿನಲ್ಲಿ ಭೂಮಿ ನೋಂದಣಿ ಆಗಿದ್ದರೆ ಮಾತ್ರ ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಬೇಕು ಎಂದು ಹೈಕಮಾಂಡ್‌ ಸ್ಪಷ್ಟವಾಗಿ ತಿಳಿಸಿದೆ ಎಂದು ಹೇಳಿದರು.

ಮಾ.10ರೊಳಗೆ ಆನಂದ್‌ರಾವ್‌  ವೃತ್ತದ ಬಳಿ ಕಚೇರಿಗೆ ಶಂಕು 

ಬೆಂಗಳೂರಿನ‌ ಆನಂದರಾವ್ ಸರ್ಕಲ್ ಬಳಿಯ ಜಾಗದಲ್ಲಿ (ಹಳೆಯ ಜೆಡಿಎಸ್ ಕಚೇರಿ) ಕಾಂಗ್ರೆಸ್‌ ಕಚೇರಿ ನಿರ್ಮಾಣದ ನಕ್ಷೆ ಸಿದ್ಧವಾಗಿದೆ. ಮಾ.10ರೊಳಗೆ ಎಐಸಿಸಿ ನಾಯಕರು ದಿನಾಂಕ ನೀಡಿದರೆ ಶಂಕುಸ್ಥಾಪನೆಗೆ ಅಡಿಗಲ್ಲು ಹಾಕುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.