ಸಿಗಂದೂರು ಸೇತುವೆ: ಬರೀ ಸಂಪರ್ಕವಲ್ಲ, ಬದುಕಿಗೆ ಬೆಳಕು

| N/A | Published : Jul 14 2025, 10:49 AM IST

BY raghavendra
ಸಿಗಂದೂರು ಸೇತುವೆ: ಬರೀ ಸಂಪರ್ಕವಲ್ಲ, ಬದುಕಿಗೆ ಬೆಳಕು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ರಾಜಕೀಯ ಪ್ರತಿನಿಧಿಯ ಬದುಕಿನಲ್ಲಿ ಕೆಲವೊಂದು ಕ್ಷಣಗಳು ಅಚ್ಚಳಿಯದ ನೆನಪಾಗಿ ಉಳಿಯುತ್ತವೆ. ನಮ್ಮ ಪಾಲಿಗೆ ಅಂಬಾರಗೋಡ್ಲು – ಕಲಸವಳ್ಳಿ – ಸಿಗಂದೂರು ಸೇತುವೆ ನಿರ್ಮಾಣ ಅಂಥದ್ದೊಂದು ಐತಿಹಾಸಿಕ ಸಾಧನೆಯಾಗಿದೆ  -ಬಿ.ವೈ. ರಾಘವೇಂದ್ರ

 -ಬಿ.ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ

ಪ್ರತಿಯೊಬ್ಬ ರಾಜಕೀಯ ಪ್ರತಿನಿಧಿಯ ಬದುಕಿನಲ್ಲಿ ಕೆಲವೊಂದು ಕ್ಷಣಗಳು ಅಚ್ಚಳಿಯದ ನೆನಪಾಗಿ ಉಳಿಯುತ್ತವೆ. ನಮ್ಮ ಪಾಲಿಗೆ ಅಂಬಾರಗೋಡ್ಲು – ಕಲಸವಳ್ಳಿ – ಸಿಗಂದೂರು ಸೇತುವೆ ನಿರ್ಮಾಣ ಅಂಥದ್ದೊಂದು ಐತಿಹಾಸಿಕ ಸಾಧನೆಯಾಗಿದೆ. ಇದು ಕೇವಲ ತಾಂತ್ರಿಕ ಶಿಲ್ಪವಲ್ಲ, ಇದು ಹೃದಯದಿಂದ ಹುಟ್ಟಿದ ನಂಬಿಕೆ, ದೀರ್ಘ ನಿರೀಕ್ಷೆಯ ಫಲ ಮತ್ತು ಬೆಳಕಿಗಾಗಿ ಹೋರಾಡಿದ ತಲೆಮಾರುಗಳ ಕನಸು.

ಒಂದು ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲಾ ಸಾಕ್ಷಿಯಾಗುತ್ತಿದ್ದೇವೆ. ಶರಾವತಿ ಕಣಿವೆಯಲ್ಲಿ ಉತ್ಪಾದನೆಯಾಗುವ ಜಲವಿದ್ಯುತ್, ಕರ್ನಾಟಕ ಇಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೈಗಾರಿಕಾ ಉತ್ಪಾದನೆ, ಕೃಷಿ ಹಾಗೂ ಇತರೆ ರಂಗಗಳಲ್ಲಿ ಮಾಡಿರುವ ಮಹತ್ತರ ಸಾಧನೆಯ ಹಿಂದಿನ ಕಾರಣಿಕ ಶಕ್ತಿ.

ಈ ಜಲವಿದ್ಯುತ್ ಯೋಜನೆಗಳನ್ನು ಅನುಷ್ಠಾನ ಮಾಡುವಾಗ, ಶರಾವತಿ ಕಣಿವೆ ಪ್ರದೇಶದ ಹಲವಾರು ಮೂಲ ನಿವಾಸಿಗಳು ಸಂತ್ರಸ್ತರಾದರು. ಈ ಪ್ರದೇಶ ಹಿನ್ನೀರಿನಲ್ಲಿ ದ್ವೀಪವಾಗಿ ಪರಿವರ್ತನೆಗೊಂಡು, ಇಲ್ಲಿನ ನಿವಾಸಿಗಳು ಹೊರ ಜಗತ್ತಿನ ಜೊತೆ ಸಂಪರ್ಕವಿಲ್ಲದೆ ಪರಿತಪಿಸುವಂತಾಯಿತು. ದೀಪದ ಬುಡದಲ್ಲಿ ಕತ್ತಲೆ ಎಂಬಂತೆ, ನಾಡಿಗೆ ಬೆಳಕು ನೀಡುತ್ತಿರುವ ಈ ಪ್ರದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿಯುವಂತಾಯಿತು.

ಈ ಭಾಗದ ಜನರು ದಶಕಗಳಿಂದ ಶರಾವತಿ ಹಿನ್ನೀರ ದ್ವೀಪದಂತಾದ ಪರಿಸರದಲ್ಲಿ ಬಾಳುತ್ತಾ ಬಂದಿದ್ದಾರೆ. ಇಲ್ಲಿನ ಲಾಂಚ್ ಸೇವೆ ಸಂಜೆಯ 5 ಗಂಟೆಗೆ ಸ್ಥಗಿತಗೊಳ್ಳುತ್ತಿದ್ದ ಕಾರಣ, ಆ ಬಳಿಕ ಊರಿಗೆ ತಲುಪುವುದು ಅಸಾಧ್ಯವಾಗುತ್ತಿತ್ತು. “ಸಂಜೆ ಐದು ಗಂಟೆ ನಂತರ ನಿಮ್ಮೂರಿಗೆ ಹೋಗಕ್ಕಾಗಲ್ಲ” ಎಂಬ ಮಾತು ಇಲ್ಲಿ ಸಾಮಾನ್ಯ. ಲಾಂಚ್ ನಿಲ್ಲಿಸಿದ ನಂತರ ಊರು ಅಕ್ಷರಶಃ ಬಂದ್ ಆಗುತ್ತಿದ್ದಂತಹ ಸ್ಥಿತಿ. ಇಲ್ಲಿನ ಗರ್ಭಿಣಿಯರು, ತುರ್ತು ಚಿಕಿತ್ಸೆಗೆ ಒಳಗಾಗುವ ರೋಗಿಗಳು, ಮಕ್ಕಳಿಗೆ ಶಾಲೆ – ಎಲ್ಲವೂ ಲಾಂಚ್‌ನ ಸಮಯಕ್ಕೆ ನಿಭಾಯಿಸಬೇಕಾದ ಸಂಕೀರ್ಣ ಪರಿಸ್ಥಿತಿ.

ಹಲವಾರು ವರ್ಷಗಳಿಂದ ಈ ಸಮಸ್ಯೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾಡುತ್ತಿತ್ತು. ಲಾಂಚ್ ನಿಲ್ಲಿಸಿದ ನಂತರ ಈ ಭಾಗದ ಜನರು ಅನುಭವಿಸುತ್ತಿದ್ದ ಆತಂಕ, ನಿರಾಶೆ, ಭೀತಿಯ ಪರಿಸ್ಥಿತಿ developmental dignity (ಅಭಿವೃದ್ಧಿಯ ಘನತೆ)ಗೆ ವಿರುದ್ಧವಾಗಿತ್ತು.

ಇದು ಒಂದು ದಿನದ ಕಥೆಯಲ್ಲ. ಎಷ್ಟೋ ತಲೆಮಾರುಗಳು ಇಂತಹ ಸ್ಥಿತಿಯೊಂದಿಗೆ ಬದುಕಿ ತಮ್ಮ ಭಾಗ್ಯ ಬದಲಾಗದು ಎಂದು ಒಪ್ಪಿಕೊಂಡಂತಾಗಿತ್ತು. “ಆದರೆ ಇಂದಿನ ದಿನಗಳಲ್ಲಿ ನಾವು ಮಧ್ಯರಾತ್ರಿ 12 ಗಂಟೆಯಾದರೂ ಮನೆ ತಲುಪುತ್ತೇವೆ” ಎಂಬುದು ಇತ್ತೀಚಿನ developmental miracle(ಅಭಿವೃದ್ಧಿಯ ಅಚ್ಚರಿ).

ಅಂಬಾರಗೋಡ್ಲು – ಕಲಸವಳ್ಳಿ – ಸಿಗಂದೂರು ಸೇತುವೆ, ಇದು ₹473 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು 2.44 ಕಿಲೋಮೀಟರ್ ಉದ್ದದ ದೇಶದ ಎರಡನೇ ಉದ್ದದ ತೂಗುಸೇತುವೆ ಆಗಿದೆ. ತಾಂತ್ರಿಕ ದೃಷ್ಟಿಯಿಂದ ಇದು ಒಂದು engineering marvel (ತಾಂತ್ರಿಕ ಅಚ್ಚರಿ), ಆದರೆ ಸಾಮಾಜಿಕ ದೃಷ್ಟಿಯಿಂದ ಇದು

developmental freedom (ಅಭಿವೃದ್ಧಿಯ ಸ್ವಾತಂತ್ರ್ಯ) ದ ಸಂಕೇತ.

ಇಂದೊಂದು ‘ತಾಂತ್ರಿಕ ಅಚ್ಚರಿ’. ಹಿನ್ನೀರಿನ ಮೇಲೆ ಅಚಲವಾಗಿ ನಿಂತಿರುವ ಈ ಸುಂದರ ಸೇತುವೆಯನ್ನು ನೋಡಲು ತಂಡೋಪತಂಡವಾಗಿ ದೇಶದ ಮೂಲೆಮೂಲೆಯಿಂದ ಜನ ಬರುತ್ತಾರೆ. ಜೋಗ ಜಲಪಾತ, ಸಿಂಗದೂರು ಮೊದಲಾದ ತಾಣಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಶರಾವತಿ ಕಣಿವೆ, ಇನ್ನು ಮುಂದೆ Buzzing Tourist Hub (ಚೈತನ್ಯದಿಂದ ತುಂಬಿದ ಪ್ರವಾಸಿ ನೆಲೆ) ಅಂದರೆ, ಆಕರ್ಷಕ ಪ್ರವಾಸಿ ಕೇಂದ್ರವಾಗುತ್ತದೆ.

ಈ ಸೇತುವೇ ರಾಜಕೀಯ ಉದ್ದೇಶದಿಂದ ನಿರ್ಮಾಣಗೊಂಡದ್ದಲ್ಲ. ಈ ಸೇತುವೆಯ ಆರಂಭ ಮತ್ತು ಅಂತ್ಯವಾಗುವ ಎರಡು ಭಾಗಗಳಾದ ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಆಡಳಿತವಿಲ್ಲ. ಆದರೂ ಸಹ, ಈ ಭಾಗದ ಜನರ ಹಿತಕ್ಕಾಗಿ ನಾವು ಈ ಯೋಜನೆಯನ್ನು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತಂದಿದ್ದೇವೆ.

ಈ ಸೇತುವೆ ಹಿನ್ನೀರ ದ್ವೀಪ ಪ್ರದೇಶದ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಇಲ್ಲಿನ ಲಾಂಚ್ ಅವಲಂಬನೆಯ ಬದಲು, ಈಗ ‘ಆ್ಯಂಬುಲೆನ್ಸ್, ಶಾಲಾ ಬಸ್, ಲಾರಿಗಳು’ – ಎಲ್ಲವೂ ತಲುಪಬಹುದು. ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲು ಪರದಾಡುವ ಅವಶ್ಯಕತೆ ಇಲ್ಲ. ಮಕ್ಕಳ ಶಿಕ್ಷಣ, ಮಹಿಳೆಯರ ಆರೋಗ್ಯ, ಕುಟುಂಬದ ನೆಮ್ಮದಿ – ಎಲ್ಲವೂ ಈ ಸೇತುವೆಯ ಮುಖಾಂತರ ತಲುಪಿದ ಸಾಧನೆ.

‘ಹೇಳದೇ ಹೋಗುವುದಿಲ್ಲ’:

ಈ ಯಶಸ್ಸಿನ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ದೃಢತೆ, ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಸಿದ್ಧತೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ developmental vision (ಅಭಿವೃದ್ಧಿ ದೃಷ್ಟಿಕೋನ) ಇವೆಲ್ಲವೂ ಸೇರಿ ಕಾರ್ಯತ್ಮಕವಾಗಿ ಸೇತುವೆ ನಿರ್ಮಾಣವಾಗಿದೆ. ಈ ಭಾಗದ ಹೋರಾಟಗಾರರ ಧೈರ್ಯ, ಪತ್ರಿಕೆಗಳ ಸಂವೇದಿ ಸುದ್ದಿಗಳು, ಮಾಧ್ಯಮಗಳ ಒತ್ತಡ – ಈ ಎಲ್ಲವೂ ಸೇತುವೆ ನಿರ್ಮಾಣದ ದಾರಿ ಸುಗಮ ಮಾಡಿದೆ.

ರಾಜಕೀಯ ನಾಯಕತ್ವವೆಂಬುದು ನೊಂದವರ ಕಣ್ಣೀರು ಒರೆಸಲು ಹಾಗೂ ಅವರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರಲು ಇರುವ ಒಂದು ಸಾಧನ ಎಂದು ನಂಬಿರುವ ಕುಟುಂಬದಿಂದ ಬಂದಿರುವವನು ನಾನು. ಸೂರ್ಯಾಸ್ತದ ನಂತರ ಶರಾವತಿ ಹಿನ್ನೀರ ದ್ವೀಪ ಪ್ರದೇಶದಲ್ಲಿ ಲಾಂಚ್ ಸೇವೆ ಸ್ಥಗಿತವಾಗುತ್ತದೆ. ಇಲ್ಲಿನ ಗರ್ಭಿಣಿಯರು ಹಾಗೂ ಅನಾರೋಗ್ಯ ಪೀಡಿತರು ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆ ತಲುಪಲು ಕಷ್ಟವಾಗುತ್ತದೆ ಎಂದು ತಿಳಿದಾಗ ಮನಸ್ಸು ತುಂಬಾ ವಿಚಲಿತವಾಗುತ್ತಿತ್ತು. ಆದರೆ ಅದಕ್ಕೆ ಪರಿಹಾರ ಸಾಮಾನ್ಯವಾಗಿರಲಿಲ್ಲ. ಈ ಕ್ಷೇತ್ರದ ಸಂಸದನಾಗಿ ಇದು ನನಗೆ ಸವಾಲಾಗಿತ್ತು.

ಅಭಿವೃದ್ಧಿ ಯೋಜನೆಯೊಂದನ್ನು ಜಾರಿಗೊಳಿಸಲು ''''Economic Viability'''' ಅಂದರೆ ಆರ್ಥಿಕ ಲಾಭವೊಂದೇ ಮಾನದಂಡವಾಗಬಾರದು. ಬದಲಾಗಿ ಆ ಯೋಜನೆಯ ''''Social Viability'''' ಅಂದರೆ ಆ ಯೋಜನೆಯಿಂದ ಉಂಟಾಗುವ ಸಾಮಾಜಿಕ ಪರಿವರ್ತನೆಯನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನಮ್ಮ ನಂಬಿಕೆ. ಈ ನಂಬಿಕೆಯೇ ಕಳಸವಳ್ಳಿ ಹಾಗೂ ಅಂಬಾರಗೊಡ್ಲು ಸೇತುವೆ ನಿರ್ಮಾಣಕ್ಕೆ ಸಂಕಲ್ಪವನ್ನು ಗಟ್ಟಿಗೊಳಿಸಿತು. ಸೇತುವೆ ಜನ ಬಳಕೆಗೆ ಮುಕ್ತವಾದ ನಂತರ ಈ ಭಾಗದಲ್ಲಿ ಅಭಿವೃದ್ಧಿಯ ಹೊಸ ಯುಗ ಆರಂಭವಾಗುವುದು.

ಈ ಸೇತುವೆಯ ನಂತರ ಪ್ರವಾಸೋದ್ಯಮವೂ ಹೊಸ ರೂಪ ತಾಳುತ್ತಿದೆ. ‘ಜೋಗ ಜಲಪಾತ, ಸಿಗಂದೂರು ದೇವಾಲಯ ಮತ್ತು ಶರಾವತಿ ಹಿನ್ನೀರು’ ಸೇರಿದಂತೆ ಹಲವಾರು ತಾಣಗಳನ್ನು ಹೊಂದಿರುವ ಈ ಪ್ರದೇಶವು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ.

ಈ ಭಾಗಗಳನ್ನು ಸಂಪರ್ಕಿಸುವುದು ಈಗ ಸುಲಭ. ಪ್ರತಿದಿನ ಸಾವಿರಾರು ವಾಹನಗಳು ಸೇತುವೆ ಮೂಲಕ ಸಂಚರಿಸುತ್ತವೆ. ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ. ಸ್ಥಳೀಯ ಉದ್ಯಮಗಳು, ಹೋಟೆಲ್‌, ಟ್ಯಾಕ್ಸಿ ಸರ್ವಿಸ್‌ಗಳು ಬೆಳವಣಿಗೆ ಕಾಣಲಿವೆ.

ಕಳೆದ ಎರಡು ದಶಕದಲ್ಲಿ ಭೂ, ಜಲ ಹಾಗೂ ಆಕಾಶ ಮಾರ್ಗದ ಸಂಪರ್ಕ ಕ್ರಾಂತಿಗೆ ಶಿವಮೊಗ್ಗ ಸಾಕ್ಷಿಯಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ, international aviation map ಅಂದರೆ ಅಂತಾರಾಷ್ಟ್ರೀಯ ವಿಮಾನಯಾನ ಭೂಪಟದಲ್ಲಿ ಜಿಲ್ಲೆಗೊಂದು ಸ್ಥಾನ ಸಿಕ್ಕಿದೆ. ಜಿಲ್ಲೆಯಲ್ಲಿ ರೈಲ್ವೆ ಜಾಲ ವಿಸ್ತರಣೆಯಾಗುತ್ತಿದೆ. ಹಾಗೆಯೇ, ಸೇತುವೆ ನಿರ್ಮಾಣದ ಮೂಲಕ ಹಿನ್ನೀರ ಪ್ರದೇಶದಲ್ಲಿ ಪ್ರಯಾಣಿಕರ ಓಡಾಟ ಹಾಗೂ ಸರಕು ಸಾಗಾಣಿಕೆ ಸುಲಭವಾಗಲಿದೆ.

1947ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವ ಪುಣ್ಯ ನಮಗೆ ಯಾರಿಗೂ ಲಭಿಸಲಿಲ್ಲ. ಇಂದು ಈ ಭಾಗದ ಜನರಿಗೆ ಲಭಿಸುತ್ತಿರುವ ಈ ಸೇತುವೆ ಸ್ವತಂತ್ರ ಸಂಗ್ರಾಮದಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ.

ಅಂದು ಲಂಕೆಗೆ ಶ್ರೀರಾಮಚಂದ್ರ ಸೇತುವೆ ಕಟ್ಟಿದರೆ ಇಂದು ಈ ದ್ವೀಪದ ಭಾಗಕ್ಕೆ ಸೇತುವೆ ಕಲ್ಪಿಸಲು ಕಾರಣೀಭೂತರಾದ ಯಡಿಯೂರಪ್ಪನವರ ಸೇತುವೆ ಕನಸಿಗೆ, ಆಂಜನೇಯನಂತೆ ಸಾವಿರಾರು ಜನ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ನಾನು ಕೂಡ ಎಲ್ಲರೊಳಗೆ ಒಬ್ಬನಾಗಿ ‘ಅಳಿಲಿನಂತೆ’ ಸೇವೆ ಸಲ್ಲಿಸಿದ್ದೇನೆ ಎಂಬ ಸಾರ್ಥಕತೆ ನನ್ನ ಹೃದಯ ತುಂಬಿ ಬರುವಂತೆ ಮಾಡಿದೆ.

ನಾಡಿನ ಏಳಿಗೆಗೆ ಮಹತ್ತರ ತ್ಯಾಗ ಮಾಡಿರುವ ಧೀಮಂತರು ನಮ್ಮ ಶರಾವತಿ ಕಣಿವೆಯ ಮಂದಿ. ಸೇತುವೆ ನಿರ್ಮಾಣದ ಮೂಲಕ, ಈ ಪ್ರದೇಶದ ಮಂದಿಯ ತ್ಯಾಗಕ್ಕೆ ಗೌರವ ಸಲ್ಲಿಸುವ ಅವಕಾಶ ಲಭಿಸಿದೆ. ನಾಡಿನ ಜನರ developmental journey (‘ಅಭಿವೃದ್ಧಿಯ ಪ್ರಯಾಣ’)ಕ್ಕೆ ಬದ್ಧರಾಗಿರುವ ಪ್ರಾಮಾಣಿಕ ಪ್ರಯತ್ನವಿದು. ಇದು ರಾಜಕೀಯ ಸಾಧನೆ ಅಲ್ಲ – ಇದು ನಂಬಿಕೆಗೂ, ಬದ್ಧತೆಗೂ ಪ್ರತೀಕವಾಗಿದೆ.

ಜೈ ಸಿಗಂದೂರು ಚೌಡೇಶ್ವರಿ ತಾಯಿ. ಜೈ ಕರ್ನಾಟಕ. ಜೈ ಭಾರತ.

Read more Articles on