ಬಡವರ ಹಿತಕ್ಕಾಗಿ ಸಿಂಗ್‌ ಆರ್ಥಿಕತೆ ರೂಪಿಸಿದ್ರು - ಮನಮೋಹನ ಸಿಂಗ್‌ರ ನೀತಿ ಎಲ್ಲರಿಗೂ ಪ್ರೇರಣೆ

| Published : Dec 28 2024, 11:38 AM IST

manmohan singh

ಸಾರಾಂಶ

ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದವರು. ಅವರ ಬದುಕು, ಆರ್ಥಿಕ ನೀತಿಗಳು ನಮ್ಮೆಗೆಲ್ಲರಿಗೂ ಪ್ರೇರಣೆ ಹಾಗೂ ಸ್ಫೂರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಬೆಳಗಾವಿ :  ಪ್ರಧಾನಿ ಡಾ.ಮನಮೋಹನ ಸಿಂಗ್ ಅವರು ವಿಶ್ವಶ್ರೇಷ್ಠ ಆರ್ಥಿಕ ತಜ್ಞ, ದೇಶದ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆಯನ್ನು ರೂಪಿಸಿದವರು. ಅವರ ಬದುಕು, ಆರ್ಥಿಕ ನೀತಿಗಳು ನಮ್ಮೆಗೆಲ್ಲರಿಗೂ ಪ್ರೇರಣೆ ಹಾಗೂ ಸ್ಫೂರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದ್ದಾರೆ.

ಶುಕ್ರವಾರ ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರ ಸಂತಾಪ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಅವರು 2013 ರಿಂದ 18 ರವರೆಗಿನ ಅವಧಿಯಲ್ಲಿ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿತ್ತು ಎಂದು ಹೇಳಿದ್ದರು ಎಂದೂ ಸ್ಮರಿಸಿದರು.

ಅವರು ಉದಾರೀಕರಣದ ಮೂಲಕ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಅಪಾರ ಜ್ಞಾನ ಹಾಗೂ ದೂರದೃಷ್ಟಿಯ ಯೋಜನೆಗಳು, ಭಾರತವು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಕಾರಣವಾಯಿತು ಎಂದರು.

ಭಾರತವು ಆರ್ಥಿಕ ಸಂಕಷ್ಟದಲ್ಲಿದ್ದಾಗ ಉದಾರೀಕರಣ ನೀತಿ ಜಾರಿ ಮಾಡಿ ದೇಶವನ್ನು ಆರ್ಥಿಕವಾಗಿ ಮೇಲೆತ್ತಿದರು. ನಮ್ಮ ಸಂವಿಧಾನದ ಮೂಲಭೂತ ಆಶಯಗಳನ್ನು ಅಕ್ಷರಶಃ ಜಾರಿ ಮಾಡಿದರು. ಆಹಾರ ಭದ್ರತೆ, ಶಿಕ್ಷಣ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿ ಹಲವು ಮೂಲಭೂತ ಹಕ್ಕು ಜಾರಿಗೊಳಿಸಿ ದೇಶದ ಬಡವರು, ಮಧ್ಯಮವರ್ಗದವರನ್ನು ಆರ್ಥಿಕವಾಗಿ ಮೇಲೆತ್ತುವುದರಲ್ಲಿ ಯಶಸ್ವಿಯಾದರು ಎಂದು ಹೇಳಿದರು.

ದೇಶದ ಆರ್ಥಿಕತೆಗೆ ಸಿಂಗ್‌ ಕೊಡುಗೆ: ಹತ್ತು ವರ್ಷ ಪ್ರಧಾನಿಯಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಮನಮೋಹನ್ ಸಿಂಗ್ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಿದರು. ದೇಶದಲ್ಲಿ ಮೊದಲ ಬಾರಿಗೆ ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಿದ್ದು ಮನಮೋಹನ್‌ ಸಿಂಗ್‌. ಇದರಡಿ ಪ್ರತಿಯೊಬ್ಬರಿಗೆ 5 ಕೆ.ಜಿ. ಅಕ್ಕಿ ನೀಡಿದರು. ಬಳಿಕ ನಾನು ಐದು ಕೆಜಿಯಿಂದ ಏಳು ಕೆಜಿಯವರೆಗೆ ಹೆಚ್ಚಿಸಿ ಅಕ್ಕಿಯನ್ನು ಉಚಿತವಾಗಿ ನೀಡಲು ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಶುರು ಮಾಡಿದೆ ಎಂದು ಸಿದ್ದರಾಮಯ್ಯ ನೆನೆದರು.

ಮನಮೋಹನ ಸಿಂಗ್‌ರಿಗಿಂತ ದೊಡ್ಡ ಆರ್ಥಿಕ ತಜ್ಞರು ಇರಬಹುದು. ಆದರೆ, ಬಹಳ ಮಿತ ಭಾಷಿಯಾಗಿ ಮಧ್ಯಮ ಮತ್ತು ಬಡ ಜನರ ಹಿತಕ್ಕಾಗಿ ದೇಶದ ಆರ್ಥಿಕತೆ ರೂಪಿಸಿದವರು ಡಾ.ಸಿಂಗ್‌. ನಾನು ಹಲವು ಬಾರಿ ಅವರನ್ನು ಭೇಟಿಯಾಗಿದ್ದೆ. ಸಂಯಮದಿಂದ ನಮ್ಮ ಮಾತು ಕೇಳಿಸಿಕೊಂಡು ಬಳಿಕ ಪ್ರಾಮಾಣಿಕ ಅಭಿಪ್ರಾಯ ನೀಡುತ್ತಿದ್ದರು. ತಾವು ಅಲಂಕರಿಸಿದ ಎಲ್ಲಾ ಹುದ್ದೆಗಳಿಗೂ ನ್ಯಾಯ ಒದಗಿಸಿದರು ಅವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.