ಆಶಾ ಕಾರ್ಯಕರ್ತೆಯರು ಕಳೆದ 10 ದಿನಗಳಿಂದ ಪ್ರತಿಭಟನೆಯಲ್ಲಿದ್ದು, ಅವರು ಇಲ್ಲದಿದ್ದರೂ ರಾಜ್ಯದ ಗ್ರಾಮೀಣ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿದೆ. ಇವರು (ಆಶಾ ಕಾರ್ಯಕರ್ತೆಯರು) ಇದ್ದರೂ, ಇಲ್ಲದಿದ್ದರೂ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಅವರೇ ತೋರಿಸಿಕೊಡುತ್ತಿದ್ದಾರೆ

ಬೆಂಗಳೂರು : ಆಶಾ ಕಾರ್ಯಕರ್ತೆಯರು ಕಳೆದ 10 ದಿನಗಳಿಂದ ಪ್ರತಿಭಟನೆಯಲ್ಲಿದ್ದು, ಅವರು ಇಲ್ಲದಿದ್ದರೂ ರಾಜ್ಯದ ಗ್ರಾಮೀಣ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿದೆ. ಇವರು (ಆಶಾ ಕಾರ್ಯಕರ್ತೆಯರು) ಇದ್ದರೂ, ಇಲ್ಲದಿದ್ದರೂ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಅವರೇ ತೋರಿಸಿಕೊಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಆ ಮೂಲಕ ರಾಜ್ಯದ ಆರೋಗ್ಯ ಸೇವೆಯಲ್ಲಿ ಆಶಾ ಕಾರ್ಯಕರ್ತೆಯರ ಅಗತ್ಯವಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷದ ನಾಯಕರು ಆರೋಗ್ಯ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯು.ಟಿ. ಖಾದರ್‌, ಕಳೆದ 10 ದಿನಗಳಿಂದ ಆಶಾ ಕಾರ್ಯಕತೆಯರು ಪ್ರತಿಭಟನೆಯಲ್ಲಿದ್ದು, ಕೆಲಸ ಮಾಡಿಲ್ಲ. ಹಾಗೆಂದು, ಜನರ ಆರೋಗ್ಯದಲ್ಲಿ ಏನೂ ಹೆಚ್ಚುಕಮ್ಮಿಯಾಗಿಲ್ಲ. ಅವರು ಇದ್ದರೂ, ಇಲ್ಲದಿದ್ದರೂ ಸಮಾಜದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಅವರೇ ತೋರಿಸಿಕೊಡುತ್ತಿದ್ದಾರೆ. ನಮ್ಮ ಆರೋಗ್ಯ ಸಿಬ್ಬಂದಿ, ವೈದ್ಯರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ತ.ನಾಡಲ್ಲಿ ಆಶಾ ಕಾರ್ಯಕರ್ತರೇ ಇಲ್ಲ:

ಸರ್ಕಾರದ ಮೇಲೆ ವಿಶ್ವಾಸ ಇಡಬೇಕು, ಸಹಕಾರ ಕೊಡಬೇಕು ಎಂದು ಕೇಳಿದ್ದೆವು. ಆದರೆ, ಅವರು ನಮ್ಮ ಮೇಲೆ ವಿಶ್ವಾಸವಿಡಲಿಲ್ಲ. ಅವರು ನಮ್ಮ ಮೇಲೆ ವಿಶ್ವಾಸವಿಡದಿದ್ದರೆ, ನಾವು ಏತಕ್ಕಾಗಿ ಅವರ ಮೇಲೆ ವಿಶ್ವಾಸ ಇಡಬೇಕು. ತಮಿಳುನಾಡಿನಲ್ಲಿ ಆಶಾ ಕಾರ್ಯಕರ್ತೆಯರೇ ಇಲ್ಲ. ಹಾಗಿದ್ದರೂ ಅಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ. ಸರ್ಕಾರಕ್ಕೆ ಸಮಯ ಕೊಡಿ ಎಂದಾಗ ಅವಕಾಶ ಕೊಡದೆ, ಸರ್ಕಾರ, ಇಲಾಖೆ, ಮುಖ್ಯಮಂತ್ರಿ ಅವರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಆರೋಗ್ಯ ಸಚಿವನಾಗಿ ಮತ್ತು ವೈಯಕ್ತಿಕವಾಗಿ ಆಶಾ ಕಾರ್ಯಕತೆಯರ ನಡವಳಿಕೆ ಬಗ್ಗೆ ಬೇಸರವಿದೆ ಎಂದು ಹೇಳಿದರು.

ಅವರು ಪ್ರತಿಭಟನೆಯಿಂದ ಹಿಂದೆ ಸರಿದು ಸಹಕಾರ ನೀಡಿದರೆ, ನಾವೂ ಅವರ ಬೇಡಿಕೆಗೆ ಸಹಕಾರ ನೀಡುತ್ತೇವೆ. ವಿಧಾನಮಂಡಲ ಅಧಿವೇಶನ ಮುಗಿಯುವುದರೊಳಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದಿದ್ದೆವು. ಹಾಗಿದ್ದರೂ ಅವರು ಪ್ರತಿಭಟನೆ ಮುಂದುವರಿಸಿದರೆ ನಾವೇನು ಮಾಡಲು ಸಾಧ್ಯ? ಎಂದರು.

ಯು.ಟಿ. ‘ಖಾರ’ದ್‌ ಮಾತು

- ಆಶಾ ಕಾರ್ಯಕರ್ತೆಯರು ಕೆಲ್ಸ ಮಾಡ್ತಿಲ್ಲ

- ಆದರೂ ಜನರ ಆರೋಗ್ಯ ಚೆನ್ನಾಗೇ ಇದೆ

- ವೈದ್ಯ, ನರ್ಸ್‌ಗಳು ಕೆಲಸ ಮಾಡ್ತಿದ್ದಾರೆ

- ಆಶಾ ಸಿಬ್ಬಂದಿ ಬೇಕಿಲ್ಲ ಎಂಬರ್ಥದ ನುಡಿ

ಆರೋಗ್ಯ ಸಚಿವ ಹೇಳಿದ್ದೇನು?

- ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಸಚಿವ ಕಿಡಿ

- ಅವರು ಸರ್ಕಾರದ ಮೇಲೆ ವಿಶ್ವಾಸವಿಡುತ್ತಿಲ್ಲ

- ನಾವ್ಯಾಕೆ ಅವರ ಮೇಲೆ ವಿಶ್ವಾಸ ಇಡಬೇಕು

- ತಮಿಳುನಾಡಲ್ಲಿ ಆಶಾ ಕಾರ್‍ಯಕರ್ತೆಯರೇ ಇಲ್ಲ

- ಆದರೂ ಆರೋಗ್ಯ ಸೇವೆ ಚೆನ್ನಾಗಿಯೇ ಇದೆ

- ಟೈಂ ಕೊಡಿ ಅಂದ್ರೂ ಅವರು ಕೇಳ್ತಿಲ್ಲ: ಆಕ್ರೋಶ

- ವಿವಾದಕ್ಕೆ ಸೃಷ್ಟಿಸಿದ ಸಚಿವ ಖಾದರ್‌ ಹೇಳಿಕೆ