ಸಾರಾಂಶ
ತನ್ನ ತಂದೆಯ ಸಾವಿನ ಸೇಡನ್ನು ಪುತ್ರ 13 ವರ್ಷಗಳ ಬಳಿಕ ತೀರಿಸಿಕೊಂಡ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದಡದಹಳ್ಳಿಯಲ್ಲಿ ನಡೆದಿದೆ.
ಹಾಸನ : ತನ್ನ ತಂದೆಯ ಸಾವಿನ ಸೇಡನ್ನು ಪುತ್ರ 13 ವರ್ಷಗಳ ಬಳಿಕ ತೀರಿಸಿಕೊಂಡ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದಡದಹಳ್ಳಿಯಲ್ಲಿ ನಡೆದಿದೆ. ಗ್ರಾಮದಲ್ಲಿ ನಿರ್ವಾಣಪ್ಪ(75) ಎಂಬುವವರನ್ನು ಮಂಗಳವಾರ ಬರ್ಬರವಾಗಿ ನಡು ರಸ್ತೆಯಲ್ಲಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಮೂರ್ತಿ ಎಂಬಾತನನ್ನು ಬಂಧಿಸಲಾಗಿದೆ.
ಹತ್ಯೆಯಾಗಿರುವ ನಿರ್ವಾಣಪ್ಪ ಸಣ್ಣಪುಟ್ಟ ವಿಚಾರಗಳಿಗೂ ಸಹೋದರರ ಜತೆ ದ್ವೇಷ ಸಾಧಿಸುತ್ತಿದ್ದ. ಸಹೋದರನ ಮೇಲೆ ಕೊಲೆ ಆರೋಪ ಹೊರಿಸಿ ಜೈಲಿಗಟ್ಟುವ ದುರುದ್ದೇಶದಿಂದ 2011ರಲ್ಲಿ ತನ್ನ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಲಕ್ಕಪ್ಪ ಎಂಬಾತನನ್ನು ಕೊಲೆ ಮಾಡಿ ಶವವನ್ನು ಸಹೋದರನ ಕಾಂಪೌಂಡ್‌ನೊಳಗೆ ಎಸೆದಿದ್ದ. ಆದರೆ ತನಿಖೆ ವೇಳೆ ನಿರ್ವಾಣಪ್ಪನ ಸಂಚು ಬಯಲಾಗಿ 7 ವರ್ಷಗಳ ಶಿಕ್ಷೆ ಆಗಿತ್ತು.
ಜೈಲುಶಿಕ್ಷೆ ಅನುಭವಿಸಿ ಕೆಲ ತಿಂಗಳ ಹಿಂದಷ್ಟೇ ಆತ ಹೊರಬಂದಿದ್ದ. ತಾನು ಕೊಲೆ ಮಾಡಿದ್ದ ಲಕ್ಕಪ್ಪನ ಮಕ್ಕಳು ಅದೇ ಗ್ರಾಮದಲ್ಲೇ ವಾಸವಿದ್ದುದರಿಂದ ಸಮೀಪದ ಮಲ್ಲಿಪಟ್ಟಣದಲ್ಲಿ ನೆಲೆಸಿದ್ದ. ಆದರೆ ಮಂಗಳವಾರ ದಡದಹಳ್ಳಿಯ ಅಂಗನವಾಡಿಗೆ ಬಂದು ವಾಪಸ್ ಹೋಗುವಾಗ ಮೃತ ಲಕ್ಕಪ್ಪನ ಪುತ್ರ ಮೂರ್ತಿ ಅಲಿಯಾಸ್ ಗುಂಡ ಮಚ್ಚಿನಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ.