ಮಹಾ ಕುಂಭಮೇಳದಲ್ಲಿ ಕಾಲ್ತುಳಿತ - ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ : ಸಚಿವ ಕೃಷ್ಣ ಬೈರೇಗೌಡ

| N/A | Published : Jan 31 2025, 09:35 AM IST

Krishna Byre Gowda

ಸಾರಾಂಶ

ಪ್ರಯಾಗ್‌ರಾಜನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟಿರುವ ಬೆಳಗಾವಿ ಮೂಲದ ನಾಲ್ವರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

 ಬೆಂಗಳೂರು :  ಪ್ರಯಾಗ್‌ರಾಜನ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟಿರುವ ಬೆಳಗಾವಿ ಮೂಲದ ನಾಲ್ವರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾ ಕುಂಭಮೇಳ ದುರಂತದಲ್ಲಿ ಬೆಳಗಾವಿ ಜಿಲ್ಲೆಯ ಮೇಘಾ ದೀಪಕ್‌ ಹತ್ತರವರ್‌ (24), ಜ್ಯೋತಿ ದೀಪಕ್‌ ಹತ್ತರವರ್‌ (44), ಅರುಣಾ ಕೋಪರ್ಡೆ(61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿದ್ದಾರೆ. ಅವರ ಮೃತ ದೇಹವನ್ನು ಏರ್‌ಲಿಫ್ಟ್‌ ಮಾಡಿ ತರಲಾಗಿದೆ. ಮೃತದೇಹವನ್ನು ದೆಹಲಿಯಿಂದ ಬೆಳಗಾವಿಗೆ ತರುವವರೆಗಿನ ಎಲ್ಲಾ ಖರ್ಚನ್ನು ಸರ್ಕಾರವೇ ಭರಿಸಿದೆ. ಅದರ ಜತೆಗೆ ಮೃತರ ಕುಟುಂಬದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲೂ ಚಿಂತನೆ ನಡೆಸಲಾಗಿದೆ ಎಂದರು.

ಕುಂಭಮೇಳಕ್ಕೆ ತೆರಳಿರುವ ಕರ್ನಾಟಕದವರಿಗೆ ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಕಂದಾಯ ಇಲಾಖೆ ಆರಂಭಿಸಿರುವ ಸಹಾಯವಾಣಿಗೂ ಕರೆಗಳು ಬಂದಿದ್ದು, ಅದರ ಆಧಾರದಲ್ಲಿ ಕುಂಭಮೇಳಕ್ಕೆ ಹೋದವರನ್ನು ಸಂಪರ್ಕಿಸಲಾಗುತ್ತಿದೆ. ಸದ್ಯ ಇಶಾ ಫೌಂಡೇಷನ್‌ ಕಡೆಯಿಂದ ಕುಂಭಮೇಳಕ್ಕೆ ತೆರಳಿದವರ ಪೈಕಿ ಓರ್ವ ವ್ಯಕ್ತಿ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ಆತನನ್ನು ಹುಡುಕುವ ಕೆಲಸ ಮುಂದುವರಿದಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಿಂದ ಎಷ್ಟು ಮಂದಿ ಕುಂಭಮೇಳಕ್ಕೆ ತೆರಳಿದ್ದಾರೆ? ಕಾಲ್ತುಳಿತದ ದುರಂತಕ್ಕೆ ಸಿಲುಕಿದವರೆಷ್ಟು ಎಂಬಂತಹ ಮಾಹಿತಿ ಉತ್ತರಪ್ರದೇಶ ಸರ್ಕಾರದಿಂದ ಲಭ್ಯವಾಗಿಲ್ಲ. ಹೀಗಾಗಿ ರಾಜ್ಯದ ಐಎಎಸ್‌ ಅಧಿಕಾರಿ ಹರ್ಷಲ್‌ ಬೋಯಲ್‌ ಅವರು ಕುಂಭಮೇಳಕ್ಕೆ ತೆರಳಿ ಅಲ್ಲಿನ ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ ರಾಜ್ಯದವರನ್ನು ಪತ್ತೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.