ಹಣದ ಬದಲು ಹೆಚ್ಚುವರಿ 5 ಕೇಜಿ ಅಕ್ಕಿ ಪೂರೈಸಲು ರಾಜ್ಯದ ಸರ್ಕಾರದ ತಯಾರಿ - ಕೇಂದ್ರದಿಂದ 28 ರು.ಗೆ ಸರ್ಕಾರಕ್ಕೆ ಅಕ್ಕಿ

| Published : Aug 22 2024, 10:25 AM IST

Annabhagya rice
ಹಣದ ಬದಲು ಹೆಚ್ಚುವರಿ 5 ಕೇಜಿ ಅಕ್ಕಿ ಪೂರೈಸಲು ರಾಜ್ಯದ ಸರ್ಕಾರದ ತಯಾರಿ - ಕೇಂದ್ರದಿಂದ 28 ರು.ಗೆ ಸರ್ಕಾರಕ್ಕೆ ಅಕ್ಕಿ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಇನ್ನು ಮುಂದೆ ಪ್ರತಿ ತಿಂಗಳು ತಲಾ 10 ಕೆ.ಜಿ. ಅಕ್ಕಿ ಲಭ್ಯವಾಗಲಿದ್ದು, ಡಿಬಿಟಿ ಮೂಲಕ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತಿರುವ 5 ಕೆ.ಜಿ. ಹೆಚ್ಚುವರಿ ಅಕ್ಕಿಯ ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು :  ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಇನ್ನು ಮುಂದೆ ಪ್ರತಿ ತಿಂಗಳು ತಲಾ 10 ಕೆ.ಜಿ. ಅಕ್ಕಿ ಲಭ್ಯವಾಗಲಿದ್ದು, ಡಿಬಿಟಿ ಮೂಲಕ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತಿರುವ 5 ಕೆ.ಜಿ. ಹೆಚ್ಚುವರಿ ಅಕ್ಕಿಯ ಹಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಈ ಹಿಂದೆ ಹೆಚ್ಚುವರಿ ಅಕ್ಕಿ ಕೊಡಲು ನಿರಾಕರಿಸಿದ್ದ ಕೇಂದ್ರ ಸರ್ಕಾರ ಇದೀಗ ರಾಜ್ಯಕ್ಕೆ ಕೆ.ಜಿ.ಗೆ 28 ರು.ನಂತೆ 2025ರ ಮಾರ್ಚ್‌ವರೆಗೆ ಪ್ರತಿ ತಿಂಗಳು 2.36 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ನೀಡಲು ಒಪ್ಪಿಗೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ತಲಾ 10 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ ಆಸೆ ಈಡೇರಲಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ.

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಳುಹಿಸಿರುವ ಪ್ರಸ್ತಾವನೆಗೆ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಒಪ್ಪಿಗೆ ಕೊಟ್ಟಿದೆ. ಹೀಗಾಗಿ, ಶೀಘ್ರದಲ್ಲೇ ಈ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬದಲು ಉಚಿತವಾಗಿ ಅಕ್ಕಿ ದೊರೆಯಲಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅನ್ವಯದಂತೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯದ 1,16,95,029 ಬಿಪಿಎಲ್, 10,88,421 ಅಂತ್ಯೋದಯ ಕಾರ್ಡ್‌ಗಳಿಗೆ ಉಚಿತವಾಗಿ ಆಹಾರ ಪದಾರ್ಥ ವಿತರಿಸುತ್ತಿದೆ. ಹಾಗಾಗಿ, ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯನಿಗೆ 3 ಕೆ.ಜಿ. ಅಕ್ಕಿ, 2 ಕೆ.ಜಿ. ರಾಗಿ ಸೇರಿ ಒಟ್ಟು 5 ಕೆ.ಜಿ. ಹಾಗೂ ಪ್ರತಿ ಅಂತ್ಯೋದಯ ಕಾರ್ಡ್‌ಗೆ 20 ಕೆ.ಜಿ. ಅಕ್ಕಿ, 15 ಕೆ.ಜಿ. ರಾಗಿ ಸೇರಿ ಒಟ್ಟು 35 ಕೆ.ಜಿ. ಆಹಾರ ಪದಾರ್ಥ ಉಚಿತವಾಗಿ ಸಿಗುತ್ತಿದೆ. ಇದೀಗ ರಾಜ್ಯವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಅಕ್ಕಿ ನೀಡಿದರೆ ಒಟ್ಟು 10 ಕೆ.ಜಿ. ಆಹಾರ ಪದಾರ್ಥ ಸಿಕ್ಕಿದಂತಾಗುತ್ತದೆ.

 ರಾಜ್ಯಕ್ಕೆ 144 ಕೋಟಿ ರು. ಉಳಿತಾಯ 

ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್‌ನ ಪ್ರತಿ ಸದಸ್ಯನಿಗೆ ಕೆ.ಜಿ.ಗೆ 34 ರು.ನಂತೆ 5 ಕೆ.ಜಿ. ಅಕ್ಕಿಗೆ 170 ರು. ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಸರ್ಕಾರ ಹಾಕುತ್ತಿದೆ. ಅಂತ್ಯೋದಯ ಕಾರ್ಡ್‌ನಲ್ಲಿ ನಾಲ್ಕು ಸದಸ್ಯರಿದ್ದರೆ ಕುಟುಂಬಕ್ಕೆ 170 ರು., ಐದು ಸದಸ್ಯರಿದ್ದರೆ 510 ರು., ಆರು ಸದಸ್ಯರಿದ್ದರೆ 850 ರು. ಹಾಕಲಾಗುತ್ತಿದೆ.

ಯೋಜನೆಯಡಿ ಪ್ರತಿ ತಿಂಗಳು ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಒಟ್ಟು ಒಂದು ಕೋಟಿ ಕಾರ್ಡ್‌ಗಳಿಗೆ 450ರಿಂದ 500 ಕೋಟಿ ರು. ಜಮೆ ಮಾಡಲಾಗುತ್ತದೆ. ಇದೀಗ ಕೇಂದ್ರದಿಂದ ಪ್ರತಿ ಕೆ.ಜಿ. ಅಕ್ಕಿಗೆ 28 ರು.ನಂತೆ ಸರಬರಾಜು ಮಾಡಲು ಒಪ್ಪಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ಪ್ರತಿ ಕೆ.ಜಿ.ಗೆ 6 ರು.ನಂತೆ ಉಳಿತಾಯವಾಗಲಿದೆ. ಪ್ರತಿ ತಿಂಗಳು 12 ಕೋಟಿ ರು.ನಂತೆ ವರ್ಷಕ್ಕೆ 144 ಕೋಟಿ ರು. ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.