ಸಾರಾಂಶ
ರೈತರು ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ-2024 ಮಾಡಿದ್ದೇವೆ. ಇದನ್ನು ಜಾರಿಗೊಳಿಸಲು ಕಾರ್ಯಪಡೆ ರಚನೆ ಮಾಡುತ್ತಿದ್ದು, ರೈತರಲ್ಲಿ ಅರಿವು ಮೂಡಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದ್ದಾರೆ.
ಬೆಂಗಳೂರು : ‘ರೈತರು ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ-2024 ಮಾಡಿದ್ದೇವೆ. ಇದನ್ನು ಜಾರಿಗೊಳಿಸಲು ಕಾರ್ಯಪಡೆ ರಚನೆ ಮಾಡುತ್ತಿದ್ದು, ರೈತರಲ್ಲಿ ಅರಿವು ಮೂಡಿಸಿ ಹಂತ-ಹಂತವಾಗಿ ನೂತನ ಕಾನೂನು ಜಾರಿಗೊಳಿಸಿ. ಏಕಾಏಕಿ ನುಗ್ಗಬೇಡಿ, ಜಾಣ್ಮೆಯಿಂದ ತಿದ್ದುಪಡಿ ಜಾರಿಗೆ ತನ್ನಿ’ ಎಂದು ನೀರಾವರಿ ಇಲಾಖೆ ಎಂಜಿನಿಯರ್‌ಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದ್ದಾರೆ.
ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೀರಿನ ಕಾಲುವೆಗಳ ಪಕ್ಕದಲ್ಲಿ ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆಯುವಂತಿಲ್ಲ ಎಂಬುದು ಸೇರಿ ಹಲವು ನಿಯಮ ಜಾರಿ ಮಾಡಿದ್ದೇವೆ. ಕಾನೂನು ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಯಲಿದೆ. ನಿಮ್ಮ ಮೇಲೆ ರಾಜಕೀಯ ಒತ್ತಡ ಹೆಚ್ಚಾಗಲಿದೆ. ಯಾವುದಕ್ಕೂ ಬಗ್ಗದೆ ತಾಳ್ಮೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಕಾಲುವೆಗಳ ಯೋಜನೆ ರೂಪಿಸುವವರು ನೀವು. ಈ ಯೋಜನೆ ಹಾಕುವಾಗ ಎಷ್ಟು ಎಕರೆಗೆ ನೀರು ತಲುಪಬೇಕು ಎಂದು ಲೆಕ್ಕ ಹಾಕಿರುತ್ತೀರಿ. ಆದರೆ ಕೆಆರ್‌ಎಸ್ ನೀರು ಮಳವಳ್ಳಿಗೆ ಹರಿಯುತ್ತಿಲ್ಲ. ಇದೇ ರೀತಿಯ ಸಮಸ್ಯೆ ಬೆಳಗಾವಿ, ತುಂಗಭದ್ರಾ ನೀರಾವರಿ ವಿಭಾಗದಲ್ಲೂ ಇದೆ. 10 ಎಚ್‌ಪಿ ಸಾಮರ್ಥ್ಯದ ಮೋಟರ್‌ಗಳನ್ನು 100 ಮೀ. ಅಂತರದಲ್ಲಿ ಹಾಕಿ ತಮ್ಮದೇ ಹೊಂಡ ಮಾಡಿಕೊಂಡು ಅಲ್ಲಿಂದ 20 ಕಿ.ಮೀ ದೂರದವರೆಗೂ ನೀರು ಎಳೆದುಕೊಂಡು ಹೋಗಲಾಗುತ್ತಿದೆ. ನೀರಾವರಿ ಕಾಲುವೆಯ ಕೊನೆವರೆಗೂ ಸಮರ್ಪಕವಾಗಿ ನೀರು ತಲುಪಬೇಕು. ಇಲ್ಲದಿದ್ದರೆ, ಯೋಜನೆ ಸಾಕಾರಗೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆಯನ್ನು ನಾವು 25 ಸಾವಿರ ಕೋಟಿವೆಚ್ಚ ಮಾಡಿದ್ದೇವೆ. ಇಷ್ಟು ಹಣ ಖರ್ಚು ಮಾಡಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸದಿದ್ದರೆ ಹೇಗೆ? ಈ ಯೋಜನೆಯಲ್ಲಿ 3 ತಿಂಗಳಲ್ಲಿ ಸಿಗುವ ನೀರು ಕೇವಲ 24 ಟಿಎಂಸಿಯಷ್ಟು ಮಾತ್ರ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವಿದೆ. ನೀರು ಹೆಚ್ಚಾಗಿ ಸಿಗುತ್ತಿರುವ ಭಾಗಗಳ ಜನರಿಗೆ ನೀರಿನ ಬಳಕೆ ಬಗ್ಗೆ ಹೆಚ್ಚು ಅರಿವಿಲ್ಲ. ಹೀಗಾಗಿ ಈ ತಿದ್ದುಪಡಿ ತರಲಾಗಿದೆ ಎಂದು ಹೇಳಿದರು.
ಟಾಸ್ಕ್ ಫೋರ್ಸ್ ರಚನೆ:
ಕಾಲುವೆಗಳಿಂದ ಅಕ್ರಮವಾಗಿ ನೀರನ್ನು ಎತ್ತುವುದನ್ನು ತಡೆಯಲು ನೀರಾವರಿ ಇಲಾಖೆ ಅಧಿಕಾರಿಗಳ ಜತೆಗೆ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಸುವ ಇಂಧನ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ರಾಜಕೀಯ ಒತ್ತಡಗಳು ಎದುರಾಗಲಿದೆ ಎಂದು ನನಗೆ ಗೊತ್ತಿದೆ. ಹೀಗಾಗಿ ಈ ತಿದ್ದುಪಡಿಯ ಸಾಧಕ ಬಾಧಕಗಳನ್ನು ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಿ ಎಂದು ಹೇಳಿದರು.
ಸಚಿವರಾದ ಎಚ್.ಕೆ ಪಾಟೀಲ್ ಅವರು ನೀರು ಬಳಕೆದಾರರ ಸಹಕಾರ ಸಂಘ ಆರಂಭಿಸಿದ್ದು, ಅದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಇದನ್ನು ಬಲಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ಚರ್ಚಿಸಿ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದರು.
ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ಗುಪ್ತ, ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ, ನೀರಾವರ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಎಂಜಿನಿಯರ್‌ಗಳು ಹಾಜರಿದ್ದರು.