ಸಾರಾಂಶ
ಕಳೆದೊಂದು ವರ್ಷದಿಂದ ತಿರುಮಲ ತಿರುಪತಿಯ ಲಡ್ಡು ಪ್ರಸಾದದಲ್ಲಿ ಇಲ್ಲದ ನಂದಿನಿ ತುಪ್ಪದ ಸ್ವಾದ ಇನ್ನುಮುಂದೆ ಭಕ್ತಾದಿಗಳಿಗೆ ಪುನಃ ಲಭ್ಯವಾಗಲಿದೆ. ನಷ್ಟದ ನೆಪದಲ್ಲಿ ಕಳೆದ ವರ್ಷ ತಿರುಮಲ ತಿರುಪತಿಗೆ ನಂದಿನಿ ತುಪ್ಪ ಸರಬರಾಜನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸ್ಥಗಿತಗೊಳಿಸಿತ್ತು.
ಬೆಂಗಳೂರು: ಕಳೆದೊಂದು ವರ್ಷದಿಂದ ತಿರುಮಲ ತಿರುಪತಿಯ ಲಡ್ಡು ಪ್ರಸಾದದಲ್ಲಿ ಇಲ್ಲದ ನಂದಿನಿ ತುಪ್ಪದ ಸ್ವಾದ ಇನ್ನುಮುಂದೆ ಭಕ್ತಾದಿಗಳಿಗೆ ಪುನಃ ಲಭ್ಯವಾಗಲಿದೆ. ನಷ್ಟದ ನೆಪದಲ್ಲಿ ಕಳೆದ ವರ್ಷ ತಿರುಮಲ ತಿರುಪತಿಗೆ ನಂದಿನಿ ತುಪ್ಪ ಸರಬರಾಜನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸ್ಥಗಿತಗೊಳಿಸಿತ್ತು.
2013-14ನೇ ಸಾಲಿನಿಂದ ನಿರಂತರವಾಗಿ 5 ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ತಿರುಪತಿ ಪ್ರಸಾದ ಲಡ್ಡು ತಯಾರಿಕೆ ಸೇರಿದಂತೆ ಇತರ ಉದ್ದೇಶಗಳಿಂದ ಸರಬರಾಜು ಮಾಡಿತ್ತು. ಆದರೆ, ಕಳೆದ ವರ್ಷ ಕಡಿಮೆ ಮೊತ್ತಕ್ಕೆ ತುಪ್ಪ ಮಾರಾಟ ಮಾಡಲು ಒಪ್ಪದೆ ಸರಬರಾಜು ಟೆಂಡರ್‌ನಿಂದಲೂ ಕೆಎಂಎಫ್ ಹಿಂದೆ ಸರಿದಿತ್ತು. ಇದೀಗ ಮತ್ತೆ ಸರಬರಾಜು ಆರಂಭಗೊಂಡಿದ್ದು, 2024-24ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರಾರಂಭಿಕವಾಗಿ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ಸರಬರಾಜು ಆಗಲಿದೆ.
ಇದೀಗ ಮತ್ತೆ ತಿರುಮಲ ತಿರುಪತಿಗೆ ಕೆಎಂಎಫ್ ನಂದಿನಿ ತುಪ್ಪ ಸರಬರಾಜು ಮಾಡಬೇಕೆಂದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಟೆಂಡರ್ ಮೂಲಕ ಬೇಡಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹಕಚೇರಿ ಕೃಷ್ಣಾದಲ್ಲಿ ಮೊದಲ ಹಂತದ ತುಪ್ಪ ಸರಬರಾಜು ಟ್ಯಾಂಕರ್‌ಗೆ ಚಾಲನೆ ನೀಡಿದರು.
ಈ ಹಿಂದೆ ಹತ್ತು ವರ್ಷಗಳ ಕಾಲ ಆಂಧ್ರಪ್ರದೇಶದಲ್ಲಿರುವ ತಿರುಮಲ ದೇವಸ್ಥಾನಕ್ಕೆ ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಶ್ರೀವಾರಿ ಪ್ರಸಾದ ತಯಾರಿಕೆಗೆ ಕೆಎಂಎಫ್ ಸರಬರಾಜು ಮಾಡಿತ್ತು. ಅಂತೆಯೇ ಇನ್ನು ಮುಂದೆಯೂ ಟ್ಯಾಂಕರ್ ಮೂಲಕ ಹಸುವಿನ ಶುದ್ಧ ತುಪ್ಪವನ್ನು ಸರಬರಾಜು ಮಾಡಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕೆ.ಜಗದೀಶ್ ಅವರು ತಿಳಿಸಿದ್ದಾರೆ.