ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲಿಗೆ (ಸುವರ್ಣ ರಥ) ಮರು ಚಾಲನೆ ದೊರೆತಿದ್ದು, ಇಲ್ಲಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ 'ಜ್ಯೂವೆಲ್ ಆಫ್ ಸೌತ್' ಪ್ರವಾಸ ಆರಂಭಿಸಿತು.

ಬೆಂಗಳೂರು : ಗೋಲ್ಡನ್ ಚಾರಿಯೆಟ್ ಐಷಾರಾಮಿ ರೈಲಿಗೆ (ಸುವರ್ಣ ರಥ) ಮರು ಚಾಲನೆ ದೊರೆತಿದ್ದು, ಇಲ್ಲಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ 'ಜ್ಯೂವೆಲ್ ಆಫ್ ಸೌತ್' ಪ್ರವಾಸ ಆರಂಭಿಸಿತು.

ಚಾರಿಯೆಟ್‌ಗೆ ಹಸಿರು ನಿಶಾನೆ ತೋರಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಈ ರೈಲು ಪ್ರವಾಸ ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಸ್ಥಳಗಳನ್ನು ಅನಾವರಣ ಮಾಡಲಿದೆ. 2018 ರಿಂದ ಸ್ಥಗಿತಗೊಂಡಿದ್ದ ಇದಕ್ಕೆ ಮರು ಚಾಲನೆ ನೀಡಿದ್ದೇವೆ ಎಂದರು.

ಪ್ರಸ್ತುತ ರೈಲಿನ ಒಳಾಂಗಣವನ್ನು ಕಲಾತ್ಮಕವಾಗಿ ನಿರ್ಮಿಸಲಾಗಿದೆ. 18 ಕೋಚ್‌ಗಳಲ್ಲಿ ಕರ್ನಾಟಕ ಆಳಿದ ಕದಂಬ, ಹೊಯ್ಸಳ, ವಿಜಯನಗರ ಚಾಲುಕ್ಯರ ಹೆಸರನ್ನು ಇಡಲಾಗಿದೆ. ಊಟ, ವಸತಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ. ಪಶ್ಚಿಮ ಘಟ್ಟ, ಪ್ರಾಚೀನ ಕಡಲತೀರ, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗ ರನ್ನು ಕರೆದೊಯ್ಯಲಿದೆ ಎಂದು ಹೇಳಿದರು.

ರೈಲು 44 ಸುಸುಜ್ಜಿತ ಕ್ಯಾಬಿನ್‌ಗಳು, ಎನ್ ಸೂಟ್ ಸ್ನಾನಗೃಹ, ವೈಫೈ ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್‌ಗಳು ಭಾರತೀಯ ಮತ್ತು ಅಂತಾರಾಷ್ಟ್ರೀಯ ಪಾಕಪದ್ಧತಿಯ ಊಟ, ತಿನಿಸು ಒದಗಿ ಸುತ್ತವೆ. ಲಾಂಜ್ ಬಾರ್, ಫಿಟ್‌ನೆಸ್ ಸೆಂಟರ್‌ ಇತರೆ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಎಲ್ಲೆಲ್ಲಿ ಪ್ರವಾಸ?:

'ಜೂವೆಲ್ ಆಫ್ ಸೌತ್' ಪ್ರವಾಸ ಶನಿವಾರ ಬೆಂಗಳೂರಿನಿಂದ ಆರಂಭವಾಗಿದ್ದು, ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರು, ಕೊಚ್ಚಿನ್, ಮರಾರಿಕುಲಂಗೆ ತೆರಳಿ ಡಿ.26ರಂದು ಬೆಂಗಳೂ ರಿಗೆ ಹಿಂದಿರುಗಲಿದೆ. ಐದು ದಿನಗಳ ಪ್ರವಾಸಕ್ಕೆ ಒಬ್ಬರಿಗೆ ₹4,07,700 ದರ ನಿಗದಿಯಾಗಿದೆ.

ಮುಂದಿನ ಪ್ರವಾಸ 'ಪ್ರೈಡ್ ಆಫ್ ಕರ್ನಾಟಕ' ಫೆ.1 ರಿಂದ ಆರಂಭವಾಗಿ ಫೆ.6ರವರೆಗೆ ನಡೆಯಲಿದೆ. ಬೆಂಗಳೂರಿಂದ - ನಂಜನಗೂಡು- ಮೈಸೂರು- ಹಳೇಬೀಡು, ಚಿಕ್ಕಮಗಳೂರು, ಹೊಸಪೇಟೆ-ಗೋವಾ- ಬೆಂಗಳೂರನ್ನು ಒಳಗೊಂಡಿದ್ದು ಒಬ್ಬರಿಗೆ ₹2,71,800 ವೆಚ್ಚ ಆಗಲಿದೆ.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾವ್ಯದರ್ಶಿ ಡಾ| ಶಾಲಿನಿ ರಜನೀಶ್, ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ಕೆಎಸ್ ಟಿಡಿಸಿ ಅಧ್ಯಕ್ಷ ಎಂ.ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಇದ್ದರು.