ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿಯವರು ಖರೀದಿ ಮಾಡಿದ ಭೂಮಿಗೆ ಸಂಬಂಧಿಸಿದ ದಾಖಲೆಗಳು ನಕಲಿಯಾಗಿದ್ದು, ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ಅವರು ಭೂಮಿ ಖರೀದಿ ಮಾಡಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿಯವರು ಖರೀದಿ ಮಾಡಿದ ಭೂಮಿಗೆ ಸಂಬಂಧಿಸಿದ ದಾಖಲೆಗಳು ನಕಲಿಯಾಗಿದ್ದು, ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ಅವರು ಭೂಮಿ ಖರೀದಿ ಮಾಡಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಿದ ದೇವರಾಜು ನೀಡಿರುವ ವಂಶವೃಕ್ಷವೇ ನಕಲಿ. ಸಹೋದರ ಕುಟುಂಬದ ಮಾಹಿತಿ ಮರೆಮಾಚಿ ದೇವರಾಜು ಅವರು ಭೂಮಿ ಮಾರಿದ್ದಾರೆ. ಹಿರಿಯ ಸಹೋದರ ಮಲ್ಲಯ್ಯನ ಕುಟುಂಬ ಹಾಗೂ ಎರಡನೇ ಸಹೋದರ ಮೈಲಾರಯ್ಯನ ಮಗಳು ಜಮುನಾ ಹೆಸರು ಕೈ ಬಿಟ್ಟು ವಂಶವೃಕ್ಷ ಸೃಷ್ಟಿಮಾಡಿದ್ದು, ಸ್ನೇಹಮಯಿ ಕೃಷ್ಣ ಅವರು ದಾಖಲೆಯಲ್ಲಿನ ತಪ್ಪು ಕಂಡು ಹಿಡಿದಿದ್ದಾರೆ. ಹೀಗಾಗಿ, ಜಮುನಾಗೆ ವಾಸ್ತವಾಂಶ ತಿಳಿಸಿ ದೂರುದಾರರು ದಾವೆ ಹಾಕಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಕ್ಕೆ ಕೊಟ್ಟಿರುವ ಹೇಳಿಕೆಯಲ್ಲೇ ಮಲ್ಲಯ್ಯ ಹಾಗೂ ದೇವರಾಜು ಕುಟುಂಬ ಭೂಮಿ ಮಾರಾಟದ ಬಗ್ಗೆ ತಿಳಿಸಿದೆ. ಇದೆಲ್ಲ ಗೊತ್ತಿದ್ದರೂ ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಕೊಂಡುಕೊಂಡಿದ್ದಾರೆ. 1992ರಲ್ಲಿ ದೇವನೂರು ಬಡಾವಣೆಗೆ ನೋಟಿಫೈ ಮಾಡಿದ್ದು, ತರಾತುರಿಯಲ್ಲಿ ತಪ್ಪು ದಾಖಲೆ ಸೃಷ್ಟಿಸಿದ್ದಾರೆ. ಇದೆಲ್ಲವೂ ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದ ವೇಳೆಯೇ ನಡೆದಿದೆ ಎನ್ನಲಾಗಿದೆ.
ಹಾಗಾಗಿಯೇ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪ್ರಭಾವ ಇದೆ ಎನ್ನುವುದು ತಮ್ಮ ವಾದ.
ಅಧಿಕಾರಿಗಳು ಕೂಡಲೇ ಆಗಿರುವ ಕ್ರಯವನ್ನು ರದ್ದು ಮಾಡಬೇಕು ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.