ಗಂಗಾಜಲ ಮಾರಾಟಕ್ಕೆ ಮಾತ್ರ ಆಕ್ಷೇಪ : ನೀರು ಕಲುಷಿತವಾಗಿದೆ ಎಂದು ಕೇಂದ್ರವೇ ಹೇಳಿದೆ : ಪ್ರಿಯಾಂಕ್‌

| N/A | Published : Feb 27 2025, 07:50 AM IST

priyank kharge

ಸಾರಾಂಶ

ಉತ್ತರ ಪ್ರದೇಶದಲ್ಲಿನ ಶೇ.12 ರಷ್ಟು ರೋಗಗಳಿಗೆ ಗಂಗಾನದಿಯ ಕಲುಷಿತ ನೀರು ಮೂಲ ಕಾರಣ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಉತ್ತರ ಪ್ರದೇಶದ ಸಂಸ್ಥೆಗಳೇ ಹೇಳಿವೆ.

 ಬೆಂಗಳೂರು : ಉತ್ತರ ಪ್ರದೇಶದಲ್ಲಿನ ಶೇ.12 ರಷ್ಟು ರೋಗಗಳಿಗೆ ಗಂಗಾನದಿಯ ಕಲುಷಿತ ನೀರು ಮೂಲ ಕಾರಣ ಎಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಉತ್ತರ ಪ್ರದೇಶದ ಸಂಸ್ಥೆಗಳೇ ಹೇಳಿವೆ. 

ಹೀಗಿರುವಾಗ ಖಾಸಗಿ ಸಂಸ್ಥೆಗಳು ಗಂಗಾಜಲವನ್ನು ವಾಣಿಜ್ಯೀಕರಣ ಮಾಡಿ ಮಾರಾಟ ಮಾಡುತ್ತಿರುವುದನ್ನು ಹಾಗೂ ಭಾವನಾತ್ಮಕವಾಗಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿರುವುದನ್ನು ಟೀಕಿಸಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಗಂಗಾಜಲದ ಮಾಲಿನ್ಯದ ಕುರಿತ ವರದಿ ಹಾಗೂ 100 ಎಂ.ಎಲ್‌. ಗಂಗಾಜಲವನ್ನು ₹69ಕ್ಕೆ ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿರುವ ಬಗ್ಗೆ ಎಕ್ಸ್‌ ಖಾತೆಯಲ್ಲಿ ಟೀಕಿಸಿದ್ದ ಪ್ರಿಯಾಂಕ್‌ ಖರ್ಗೆ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ನಾನು ಗಂಗಾಜಲದ ಮಾಲಿನ್ಯದ ಬಗ್ಗೆ ಮಾತನಾಡುತ್ತಿಲ್ಲ. ತ್ರಿವೇಣಿ ಸಂಗಮದಲ್ಲಿ ಮುಳುಗುವುದಕ್ಕೂ ನನ್ನ ಆಕ್ಷೇಪವಿಲ್ಲ. ಯಾರಾದರೂ ಹೋಗಿ ಗಂಗಾಸ್ನಾನ ಮಾಡಿ ಅವರ ಪಾಪ ತೊಳೆದುಕೊಳ್ಳಬಹುದು. ಆದರೆ ಕೇಂದ್ರ ಸರ್ಕಾರದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಉತ್ತರ ಪ್ರದೇಶದ ಸಂಸ್ಥೆಗಳು ಏನು ಹೇಳಿವೆ ಎಂಬುದನ್ನು ನಾನು ಹೇಳಿದ್ದೇನೆ ಎಂದು ಹೇಳಿದರು.

ಶೇ.12ರಷ್ಟು ಉತ್ತರ ಪ್ರದೇಶದಲ್ಲಿನ ರೋಗಗಳಿಗೆ ಗಂಗಾ ನದಿ ಕಲುಷಿತ ನೀರು ಮೂಲ ಎಂದು ವರದಿಗಳು ಹೇಳಿದೆ. ಇದನ್ನು ಕುಂಭಮೇಳಕ್ಕೂ ಮೊದಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಕುಂಭಮೇಳ ನಡೆಯುವ ಅವಧಿಯಲ್ಲಿನ ನೀರಿನ ಮಾದರಿಗಳ ಪರೀಕ್ಷಾ ವರದಿಗಳೂ ಇದೇ ರೀತಿ ಬಂದಿವೆ. ನೀರಿನಲ್ಲಿ ಮನುಷ್ಯರ ಹಾಗೂ ಪ್ರಾಣಿಗಳ ಹೊಲಸು ತೇಲುತ್ತಿದೆ. ಇದು ಸ್ನಾನ ಮಾಡಲು ಯೋಗ್ಯವಿಲ್ಲ ಎಂದು ಅವರೇ ಹೇಳಿದ್ದಾರೆ ಎಂದರು.

ಹೀಗಿರುವಾಗ ಆ ನೀರನ್ನು ವಾಣಿಜ್ಯೀಕರಣ ಮಾಡುತ್ತಿರುವುದನ್ನು ನಿಯಂತ್ರಿಸುವುದು ಯಾರು? 54 ಕೋಟಿ ಜನ ಬಂದು ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂದು ಹೇಳುತ್ತಿದ್ದಾರಲ್ಲ. ಅದರಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಯಾರಾದರೂ ಮಾತನಾಡುತ್ತಿದ್ದಾರಾ? ಹರಿದ್ವಾರ, ಬನಾರಸ್‌, ಪ್ರಯಾಗರಾಜ್‌ ಎಲ್ಲಾ ಕಡೆಯೂ ನದಿ ನೀರಿನ ಪಕ್ಕದಲ್ಲೇ ನಾಗರಿಕತೆಗಳು ಇವೆ. ಮೂರ್ನಾಲ್ಕು ಸಾವಿರ ವರ್ಷಗಳ ನಮ್ಮ ಪರಂಪರೆ ಮುಂದುವರೆಸಬೇಕು. ಆದರೆ ಕಲುಷಿತ ನೀರಿಗೆ ಹೊಣೆ ಯಾರು ಎಂದು ಖರ್ಗೆ ಪ್ರಶ್ನಿಸಿದರು.

ಜನ ಮರಳು ಮಾಡ್ತಾರೆ: ವಾಣಿಜ್ಯ ಚಟುವಟಿಕೆಯಿಂದ ಜನರನ್ನು ಮರುಳು ಮಾಡುತ್ತಿದ್ದಾರೆ. ಪಾಸ್‌ಪೋರ್ಟ್‌ ಫೋಟೋ ಇಟ್ಟುಕೊಂಡು ನಿಮಗೆ ಪುಣ್ಯ ಸ್ನಾನ ಮಾಡಿಸುತ್ತೇವೆ ಎಂದು ಫೋಟೋವನ್ನು ವಿಡಿಯೋ ಕಾಲ್‌ನಲ್ಲಿ ಡುಮ್ಕಿ ಹೊಡೆಸುತ್ತಿದ್ದಾರಲ್ವ. ಜನ ಮರುಳೋ, ಜಾತ್ರೆ ಮರಳೋ ಎಂದು ಅವರಿಗೆ ಫೋಟೋ ಕಳುಹಿಸಿ ಕೊಡುತ್ತಿದ್ದಾರಲ್ಲ? ಇಂಥವುಗಳಿಗೆ ಮಾತ್ರ ನಮ್ಮ ಆಕ್ಷೇಪ ಎಂದರು.