ಏರ್‌ಶೋನಲ್ಲಿ ದೇಸಿ ವಿಮಾನಗಳದ್ದೇ ಸದ್ದು! - ಮೊದಲ ದಿನ ಭಾರತೀಯ ಸೇನಾಪಡೆಗಳ ಶಕ್ತಿ ಪ್ರದರ್ಶನ

| N/A | Published : Feb 11 2025, 07:38 AM IST

air show of air force in bhopal

ಸಾರಾಂಶ

: ಸ್ವಾವಲಂಬಿ ಭಾರತ ಪರಿಕಲ್ಪನೆ, ಭಾರತೀಯ ಸೇನಾಪಡೆಗಳ ಶಕ್ತಿ, ಸಾಮರ್ಥ್ಯದ ಅನಾವರಣದೊಂದಿಗೆ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನಕ್ಕೆ ಸೋಮವಾರ ಯಲಹಂಕ ವಾಯುಪಡೆ ನೆಲೆಯಲ್ಲಿ ಚಾಲನೆ ದೊರೆಯಿತು.

 ಬೆಂಗಳೂರು : ಸ್ವಾವಲಂಬಿ ಭಾರತ ಪರಿಕಲ್ಪನೆ, ಭಾರತೀಯ ಸೇನಾಪಡೆಗಳ ಶಕ್ತಿ, ಸಾಮರ್ಥ್ಯದ ಅನಾವರಣದೊಂದಿಗೆ ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನಕ್ಕೆ ಸೋಮವಾರ ಯಲಹಂಕ ವಾಯುಪಡೆ ನೆಲೆಯಲ್ಲಿ ಚಾಲನೆ ದೊರೆಯಿತು.

ಐದು ದಿನಗಳ ಏರೋ ಇಂಡಿಯಾದ ಉದ್ಘಾಟನಾ ವೈಮಾನಿಕ ಪ್ರದರ್ಶನದಲ್ಲಿ ಎಚ್‌ಎಎಲ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ದೇಶದ ಹೆಮ್ಮೆಯ ಲಘು ಯುದ್ಧ ವಿಮಾನ ತೇಜಸ್‌ನ ಸುಧಾರಿತ ಮಾದರಿಯಾಗಿರುವ ‘ಎಲ್‌ಸಿಎ ಎಂಕೆ 1ಎ’ ಸರಣಿಯ ವಿಮಾನಗಳು ನೀಡಿದ ಅಬ್ಬರದ ಹಾರಾಟ ಪ್ರದರ್ಶನ ನೆರೆದವರನ್ನು ಮೂಕವಿಸ್ಮಿತಗೊಳಿಸಿತು. ಅಲ್ಫಾ ಎಂಬುದಾಗಿಯು ಕರೆಯಲ್ಪಡುವ ಎಂಕೆ 1ಎ ವಿಮಾನದಲ್ಲಿ ಡಿಜಿಟಲ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ಅಸ್ತ್ರಾ ಕ್ಷಿಪಣಿ ವ್ಯವಸ್ಥೆ ಅಳವಡಿಕೆ ಸೇರಿ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ.

ಗಮನಸೆಳೆದ ಎಲ್‌ಯುಎಚ್‌: ತುಮಕೂರಿನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಘಟಕದಲ್ಲಿ ಉತ್ಪಾದನೆಯಾಗಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್‌ಯುಎಚ್) ಮೈನವಿರೇಳಿಸುವ ಪ್ರದರ್ಶನ ನೀಡಿತು. 60 ಡಿಗ್ರಿ ತಿರುವು, ಹಿಮ್ಮುಖ ಹಾರಾಟ ಸೇರಿ ಸಾಮಾನ್ಯ ಹೆಲಿಕಾಪ್ಟರ್‌ಗಳಿಗಿಂತ ಭಿನ್ನವಾದ ಹಾರಾಟ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯಿತು.

ಒಂಬತ್ತು ಹಾಕ್ ವಿಮಾನಗಳಿರುವ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ತ್ರಿವರ್ಣ ಧ್ವಜದ ಬಣ್ಣವನ್ನು ಹೊರ ಸೂಸುತ್ತಾ ಮೈ ಜುಂ ಎನ್ನಿಸುವ ರೋಚಕ ಪ್ರದರ್ಶನ ನೋಡುಗರಿಗೆ ಆಶ್ಚರ್ಯಚಕಿತಗೊಳಿಸುವ ಜೊತೆಗೆ ಖುಷಿ ಪಡಿಸಿತು.

ವಿವಿಧ ರಚನೆಯ ಮಾದರಿಗಳು: ಮೂರು ಎಂಐ-17 ಹೆಲಿಕಾಪ್ಟರ್‌ಗಳಿಂದ ಧ್ವಜ ರಚನೆ ಮಾದರಿ, 8 ಎಲ್‌ಯುಎಚ್ ಹೆಲಿಕಾಪ್ಟರ್‌ಗಳ ಭೀಮಾ, ಡಾರ್ನಿಯರ್ ವಿಮಾನದ ರಕ್ಷಕ್, ಎರಡು ಮಿಗ್-30, ಎರಡು ಹಾಕ್ ಮತ್ತು ಒಂದು ಪಿ81 ವಿಮಾನಗಳ ವರುಣ ಮಾದರಿ, ಒಂದು ಸಿ-130, ಎರಡು ಸಿ-295 ವಿಮಾನಗಳ ಸಾಥಿ ಮಾದರಿ, ಐದು ಜಾಗ್ವಾರ್ ವಿಮಾನಗಳ ಅರ್ಜುನ ಮಾದರಿ, ಎರಡು ಎಸ್‌ಯು-30 ಮತ್ತು 1 ನೇತ್ರಾ ವಿಮಾನ ಮಾದರಿ, ರಫೆಲ್ ಮತ್ತು ಎಸ್‌ಯು-30ರ ಶಕ್ತಿ ಮಾದರಿ ಮತ್ತು 3 ಎಸ್‌ಯು-30 ವಿಮಾನಗಳ ತ್ರಿಶೂಲ ಮಾದರಿ ಆಕರ್ಷಕವಾಗಿತ್ತು.

ಏರೋ ಇಂಡಿಯಾ ಶಕ್ತಿ, ಸಂಶೋಧನೆಯ ಮಹಾಕುಂಭ: ಸಚಿವ ರಾಜನಾಥ್‌ ಸಿಂಗ್‌

 ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ 15ನೇ ಆವೃತ್ತಿಯ ‘ಏರೋ ಇಂಡಿಯಾ-2025’ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಅಧಿಕೃತವಾಗಿ ಚಾಲನೆ ನೀಡಿದರು. ''ಪ್ರಯಾಗ್‌ರಾಜ್‌ನಲ್ಲಿ ದೇಶದ ಭಕ್ತಿ ಸಂಸ್ಕೃತಿಯ ಪ್ರತಿರೂಪವಾದ ಮಹಾಕುಂಭ ನಡೆಯುತ್ತಿದ್ದರೆ, ಯಲಹಂಕ ವಾಯುನೆಲೆಯಲ್ಲಿ ದೇಶದ ಶಕ್ತಿ ಹಾಗೂ ಸಂಶೋಧನೆ ಅನಾವರಣ ಮಾಡುವ ಮಹಾ ಕುಂಭಮೇಳ ಶುರುವಾಗಿದೆ’ ಎಂದು ಬಣ್ಣಿಸಿದರು.

‘ಏರೋ ಇಂಡಿಯಾದಂತಹ ಸಮ್ಮೇಳನ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಪ್ರಮುಖ ಪಾತ್ರವಹಿಸಬೇಕು. ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಉಂಟಾಗಿರುವ ಈ ಕಾಲಘಟ್ಟದಲ್ಲೂ ನಮ್ಮ ದೇಶ ಶಾಂತಿ, ಸಮೃದ್ಧಿಗೆ ಸಾಕ್ಷಿಯಾಗಿದೆ. ಭಾರತವು ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಯಾವ ದೇಶದೊಂದಿಗೂ ಪ್ರಬಲ ವೈರತ್ವ ಹೊಂದಿಲ್ಲ. ನಾವು ಎಂದೆಂದಿಗೂ ಶಾಂತಿ ಹಾಗೂ ಸ್ಥಿರತೆ ಪ್ರತಿಪಾದಿಸುತ್ತೇವೆ’ ಎಂದು ಏರೋ ಇಂಡಿಯಾ ಮೂಲಕ ಸಂದೇಶ ರವಾನಿಸಿದರು.

ಯಲಹಂಕ ವಾಯುನೆಲೆಯಲ್ಲಿ ರಾಷ್ಟ್ರಧ್ವಜ, ವಾಯುಸೇನೆ ಧ್ವಜ ಹಾಗೂ ಏರೋ ಇಂಡಿಯಾ ಧ್ವಜ ಹೊತ್ತು ತಂದ ಹೆಲಿಕಾಪ್ಟರ್‌ಗಳ ಧ್ವಜ ಫಾರ್ಮೇಷನ್‌ ಬಳಿಕ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಏರೋ ಇಂಡಿಯಾಗೆ ಚಾಲನೆ ನೀಡಿ ಮಾತನಾಡಿದರು.

ಭಾರತ ಎಂದೆಂದಿಗೂ ಶಾಂತಿಯನ್ನು ಮಾತ್ರ ಪ್ರತಿಪಾದಿಸುತ್ತದೆ. ಇದು ನಮ್ಮ ಮೂಲಭೂತ ಸಿದ್ಧಾಂತ. ಶಾಂತಿ ಹಾಗೂ ಸಹಬಾಳ್ವೆ, ಸಹಭಾಗಿತ್ವವೇ ನಮ್ಮ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಎಲ್ಲಾ ಸಮಾನ ಮನಸ್ಕ ದೇಶಗಳು ಭಾರತದೊಂದಿಗೆ ಕೈಜೋಡಿಸಬೇಕು. ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಎಲ್ಲಾ ರಾಷ್ಟ್ರಗಳೂ ಒಂದಾಗಬೇಕು ಎಂದರು.

ವಸುದೈವ ಕುಟುಂಬಕಂ ಎಂಬಂತೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ಮಾತಿನಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ರಕ್ಷಣಾ ಸಾಮರ್ಥ್ಯ ಹಾಗೂ ತಂತ್ರಜ್ಞಾನಗಳು ಶಾಂತಿ ಕದಡಲು ಬಳಕೆಯಾಗಬಾರದು. ಬದಲಿಗೆ ದೇಶಗಳ ನಡುವೆ ಶಾಂತಿ ನೆಲೆಗೊಳ್ಳಲು ಪ್ರತಿ ದೇಶವೂ ಸಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ಸಮಾನ ಮನಸ್ಕ ದೇಶಗಳು ಹಾಗೂ ಮಿತ್ರರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳು ಬೆಳೆಯಬೇಕು. ವಿದೇಶಗಳಿಂದ ಬಂದಿರುವ ರಕ್ಷಣಾ ಸಚಿವರು, ರಕ್ಷಣಾ ಅಧಿಕಾರಿಗಳು ಇದನ್ನು ಗಮನಿಸಿ ಸಹಕರಿಸಬೇಕು. ಇದಕ್ಕೆ ಏರೋ ಇಂಡಿಯಾ ವೇದಿಕೆಯಾಗಬೇಕು ಎಂದು ಹೇಳಿದರು.