ಸಾರಾಂಶ
ಬಸನಗುಡಿ ದೊಡ್ಡಬಸವಣ್ಣ ಮತ್ತು ದೊಡ್ಡ ಗಣಪತಿ ದೇವಸ್ಥಾನದಲ್ಲಿ ನ.25ರಿಂದ 26ರ ವರೆಗೆ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಬುಲ್ ಟೆಂಪಲ್ ರಸ್ತೆಯಲ್ಲಿ ಕೆಲವು ಸಂಚಾರ ಮಾರ್ಪಾಡುಗಳನ್ನು ಮಾಡಿದ್ದಾರೆ.
ಬೆಂಗಳೂರು : ಬಸನಗುಡಿ ದೊಡ್ಡಬಸವಣ್ಣ ಮತ್ತು ದೊಡ್ಡ ಗಣಪತಿ ದೇವಸ್ಥಾನದಲ್ಲಿ ನ.25ರಿಂದ 26ರ ವರೆಗೆ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಸಂಚಾರ ಪೊಲೀಸರು ಬುಲ್ ಟೆಂಪಲ್ ರಸ್ತೆಯಲ್ಲಿ ಕೆಲವು ಸಂಚಾರ ಮಾರ್ಪಾಡುಗಳನ್ನು ಮಾಡಿದ್ದಾರೆ.
ಸಂಚಾರ ಮಾರ್ಗ ಬದಲು:
* ಲಾಲ್‌ಬಾಗ್ ವೆಸ್ಟ್‌ಗೇಟ್, ಚಾಮರಾಜಪೇಟೆ, ಬುಲ್ ಟೆಂಪಲ್ ರಸ್ತೆ ಮುಖಾಂತರ ಹನುಮಂತನಗರದ ಕಡೆಗೆ ಸಂಚರಿಸುವ ವಾಹನಗಳು ಬುಲ್ ಟೆಂಪಲ್ ರಸ್ತೆಯ ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಸೀತಾರಾಮಯ್ಯ ರಸ್ತೆಯಲ್ಲಿ ಸಾಗಿ ಗವಿಪುರಂ 3ನೇ ಅಡ್ಡ ರಸ್ತೆ, ಮೌಂಟ್ ಜಾಯ್ ರಸ್ತೆಯ ಮುಖಾಂತರ ಹನುಮಂತನಗರದ ಕಡೆಗೆ ಸಾಗಬಹುದು.
* ಆರ್.ವಿ.ಟೀಚರ್ಸ್ ಕಾಲೇಜು ಜಂಕ್ಷನ್, ಟ್ರನಿಟ್ ಆಸ್ಪತ್ರೆ ರಸ್ತೆ, ಕೆ.ಆರ್.ರಸ್ತೆ, ಬ್ಯೂಗಲ್ ರಾಕ್ ರಸ್ತೆಗಳಿಂದ ಹನುಮಂತನಗರದ ಕಡೆಗೆ ತೆರಳುವ ವಾಹನಗಳು, ಟ್ಯಾಗೋರ್ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ಗಾಂಧಿ ಬಜಾರ್ ಮುಖ್ಯರಸ್ತೆ ಮುಖಾಂತರ ರಾಮಕೃಷ್ಣ ಆಶ್ರಮ ಜಂಕ್ಷನ್, ಸೀತಾರಾಮಯ್ಯ ರಸ್ತೆ, ಗವಿಪುರಂ ಎಕ್ಸ್ ಟೆನ್ಸನ್ 3ನೇ ಅಡ್ಡರಸ್ತೆ, ಮೌಂಟ್ ಜಾಯ್ ರಸ್ತೆಯ ಮೂಲಕ ಹನುಮಂತನಗರ ತಲುಪಬಹುದು.
* ತ್ಯಾಗರಾಜನಗರ, ಬನಶಂಕರಿ, ಎನ್.ಆರ್.ಕಾಲೋನಿ, ಬುಲ್ ಟೆಂಪಲ್ ರಸ್ತೆ ಕಡೆಯಿಂದ ಚಾಮರಾಜಪೇಟೆ ಕಡೆಗೆ ಸಾಗುವ ವಾಹನಗಳು ಬುಲ್ ಟೆಂಪಲ್ ರಸ್ತೆಯ ಕಾಮತ್ ಯಾತ್ರಿ ನಿವಾಸ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಬಳಿಕ ಆಶೋಕನಗರ 2ನೇ ಕ್ರಾಸ್ ರಸ್ತೆಯಲ್ಲಿ ಸಾಗಿ ಕತ್ರಿಗುಪ್ಪೆ ರಸ್ತೆಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ನಾರಾಯಣಸ್ವಾಮಿ ಸರ್ಕಲ್‌ನಲ್ಲಿ ಕೆ.ಜಿ. ನಗರ ಮುಖ್ಯರಸ್ತೆ ಅಥವಾ ಸೀತಾರಾಮಯ್ಯ ಸಾಗಿ ರಾಮಕೃಷ್ಣ ಆಶ್ರಮ ಜಂಕ್ಷನ್ ಮೂಲಕ ಚಾಮರಾಜಪೇಟೆ ತಲುಪಬಹುದು. ಸಾರ್ವಜನಿಕರು ಈ ಸಂಚಾರ ಮಾರ್ಪಾಡುಗಳಿಗೆ ಸಹಕರಿಸುವಂತೆ ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಎಲ್ಲಿ ಪಾರ್ಕಿಂಗ್?
ಎಪಿಎಸ್ ಕಾಲೇಜು ಮೈದಾನ
ಎಲ್ಲಿ ಪಿಕಪ್ ಆ್ಯಂಡ್ ಡ್ರಾಪ್?
ರಾಮಕೃಷ್ಣ ಆಶ್ರಮ ಸರ್ಕಲ್.
ರಂಗರಾವ್ ಜಂಕ್ಷನ್
ನಾರಾಯಣಸ್ವಾಮಿ ಸರ್ಕಲ್
ಎಪಿಎಸ್ ಕಾಲೇಜು
ಗಾಂಧಿ ಬಜಾರ್ ಸರ್ಕಲ್
ಪರಿಷೆಗೂ ಮುನ್ನವೇ ಕಡಲೆಕಾಯಿ ಮಾರಾಟ
ಪ್ರತಿ ವರ್ಷದಂತೆ ಈ ಬಾರಿಯೂ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿ ಸಜ್ಜಾಗಿದ್ದು, ಶುಕ್ರವಾರದಿಂದಲೇ ದೂರದೂರಿನಿಂದ ವ್ಯಾಪಾರಸ್ಥರು ದೊಡ್ಡಗಣಪತಿ ದೇವಸ್ಥಾನದ ರಸ್ತೆಯ ಎರಡು ಬದಿಗಳಲ್ಲಿ ಜಮಾಯಿಸಿದ್ದಾರೆ.
ಕಡೇ ಕಾರ್ತೀಕ ಸೋಮವಾರವಾದ ನ.೨೫ರಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಆದರೂ ನ.24 ರಿಂದ 26ರವರೆಗೆ ಮೂರು ದಿನ ಪರಿಷೆ ನಡೆಯಲಿದೆ. ಒಟ್ಟಾರೆ ಮೂರು ದಿನಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಲಿದ್ದಾರೆ.
ನೆಲಮಂಗಲ, ರಾಮನಗರ, ಮಾಗಡಿ, ಕನಕಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳ ಕಡ್ಲೆಕಾಯಿಗಳು ಪರಿಷೆಗೆ ಬರಲಿವೆ. ಜತೆಗೆ, ತಮಿಳುನಾಡು, ಆಂಧ್ರ ಮತ್ತಿತರ ಭಾಗಗಳ ವ್ಯಾಪಾರಸ್ಥರು ಆಗಮಿಸಿದ್ದು, ತರಹವಾರಿ ಕಡಲೆ ಕಾಯಿಗಳ ಮಾರಾಟ ಆರಂಭಿಸಿದ್ದಾರೆ. ಶುಕ್ರವಾರವೇ ಗ್ರಾಹಕರು ಕಡಲೆಕಾಯಿ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡುಬಂತು.
ಈ ಬಾರಿಯ ಪರಿಷೆಯಲ್ಲಿ ಕಡ್ಲೆಕಾಯಿ, ಕಡ್ಲೆಪುರಿ, ಬತ್ತಾಸು ಸೇರಿದಂತೆ ಅಕೃತವಾಗಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗುತ್ತದೆ. ಇದಲ್ಲದೆ ಬಲೂನುಗಳು, ಬೊಂಬೆಗಳು, ಬೊಂಬಾಯಿ ಮಿಠಾಯಿ, ಮಹಿಳೆಯರ ಅತ್ಯಂತ ಆಕರ್ಷಣೀಯ ಅಲಂಕಾರಿಕ ವಸ್ತುಗಳು, ಮುಖವಾಡಗಳು, ವಿವಿಧ ಹೂವಿನ ಕುಂಡಗಳು, ಪೀಪಿ ಮತ್ತಿತರ ಸಾಮಗ್ರಿಗಳನ್ನು ಮಾರುವ ಸಂಚಾರಿ ಮಾರಾಟಗಾರರು ಕೂಡ ಆಗಮಿಸಿದ್ದರು.
ಬಿಗಿ ಬಂದೋಬಸ್ತ್ :
ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆಗೆ ಈಗಿನಿಂದಲೇ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಜರಾಯಿ ಇಲಾಖೆ ಮತ್ತು ಬಿಬಿಎಂಪಿ ಒಟ್ಟಾಗಿ ತಮ್ಮ ತಮ್ಮ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡಲಿವೆ. ಹೀಗಾಗಿ, ಪರಿಷೆಗೆ ಹಣದ ಕೊರತೆಯಾಗದು. ಕಡಲೆಕಾಯಿ ಪರಿಷೆಯನ್ನು ಪ್ಲಾಸ್ಟಿಕ್‌ಮುಕ್ತವಾಗಿ ನಡೆಸಲಾಗುವುದು. ಕಡಲೆಕಾಯಿ ವ್ಯಾಪಾರಿಗಳಿಗೆ ಬೇಕಾದ ಎಲ್ಲಾ ಭದ್ರತಾ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಜರಾಯಿ ಇಲಾಖೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.
ವ್ಯಾಪಾರಸ್ಥರಿಗೆ ಸುಂಕ ವಿನಾಯಿತಿ:
ಕಡಲೆಕಾಯಿ ಪರಿಷೆಯಲ್ಲಿ ಈ ಬಾರಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡುವುದಿಲ್ಲ. ಇದಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಲಾಗಿದೆ. ಸಾಕಷ್ಟು ಬಾರಿ ಟೆಂಡರ್ ಪಡೆದವರು ಮನಸೋ ಇಚ್ಛೆ ವಸೂಲಿ ಮಾಡುತ್ತಿದ್ದರು. ಇದರ ಹೊರೆ ಭರಿಸಲು ವ್ಯಾಪಾರಿಗಳು ದರ ಹೆಚ್ಚಿಸುತ್ತಿದ್ದರು. ಇದರಿಂದ ಗ್ರಾಹಕರಿಗೆ ಹೊರೆಯಾಗುತ್ತಿತ್ತು. ಹೀಗಾಗಿ, ಸುಂಕ ವಸೂಲಿ ಮಾಡದಿರಲು ತೀರ್ಮಾನಿಸಲಾಗಿದೆ.