ಸಾರಿಗೆ ನಿಗಮಗಳು ₹2 ಸಾವಿರ ಕೋಟಿ ಸಾಲ ಪಡೆಯಲು ಒಪ್ಪಿಗೆ! ಅಸಲು, ಬಡ್ಡಿ ರಾಜ್ಯ ಸರ್ಕಾರದಿಂದಲೇ ಪಾವತಿ

| Published : Dec 31 2024, 11:51 AM IST

ksrtc

ಸಾರಾಂಶ

ನೌಕರರ ವೇತನದಲ್ಲಿ ಕಡಿತಗೊಳಿಸಲಾದ ಭವಿಷ್ಯ ನಿಧಿ ಪಾವತಿಸಲೂ ಸಾಧ್ಯವಾಗದೆ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆರ್ಥಿಕ ನೆರವು ನೀಡುವ ಬದಲು, ಆರ್ಥಿಕ ಸಂಸ್ಥೆ ಮೂಲಕ ಸಾಲ ಕೊಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗಿರೀಶ್‌ ಗರಗ

ಬೆಂಗಳೂರು : ನೌಕರರ ವೇತನದಲ್ಲಿ ಕಡಿತಗೊಳಿಸಲಾದ ಭವಿಷ್ಯ ನಿಧಿ ಪಾವತಿಸಲೂ ಸಾಧ್ಯವಾಗದೆ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಆರ್ಥಿಕ ನೆರವು ನೀಡುವ ಬದಲು, ಆರ್ಥಿಕ ಸಂಸ್ಥೆ ಮೂಲಕ ಸಾಲ ಕೊಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇಂಧನ ಬೆಲೆ ಏರಿಕೆ, ಪ್ರಯಾಣ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು ಮತ್ತಿತರ ಕಾರಣಗಳಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು 2019-20ರಿಂದ 2023-24ರ ಅವಧಿಯಲ್ಲಿ 5,209.35 ಕೋಟಿ ನಷ್ಟ ಅನುಭವಿಸಿವೆ. ಇದರಿಂದಾಗಿ ನಿಗಮಗಳು 2024ರ ನವೆಂಬರ್‌ ಅಂತ್ಯದವರೆಗೆ 6,244.29 ಕೋಟಿ ರು. ಹೊಣೆಗಾರಿಕೆ ಹೊಂದಿವೆ. ಅದರಲ್ಲಿ ನೌಕರರ ಭವಿಷ್ಯ ನಿಧಿ ಖಾತೆಗೆ ಪಾವತಿಸಬೇಕಾದ 2994.46 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

ಹೀಗಾಗಿ ನಿಗಮಗಳ ಹೊಣೆಗಾರಿಕೆ ತಗ್ಗಿಸಲು, ಅದರಲ್ಲೂ ಭವಿಷ್ಯ ನಿಧಿ ಬಾಕಿ ಮೊತ್ತ ಪಾವತಿಸಲು ಅಗತ್ಯವಿರುವ ಅನುದಾನ ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಸರ್ಕಾರ ಇದೀಗ ಅನುದಾನ ನೀಡುವ ಬದಲು ಆರ್ಥಿಕ ಸಂಸ್ಥೆ ಮೂಲಕ 2 ಸಾವಿರ ಕೋಟಿ ರು. ಸಾಲ ಪಡೆಯಲು ಅನುಮತಿಸಿದೆ.

ಸರ್ಕಾರವೇ ಪಾವತಿಸಲಿದೆ ಅಸಲು, ಬಡ್ಡಿ: ಸರ್ಕಾರ ನೀಡಿರುವ ಅನುಮತಿಯಂತೆ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಸುಧಾರಿಸಲು ಸರ್ವೀಸ್‌ ಲೋನ್ ರೂಪದಲ್ಲಿ 2 ಸಾವಿರ ಕೋಟಿ ರು. ಸಾಲ ಪಡೆಯುವಂತೆ ಸೂಚಿಸಲಾಗಿದೆ. ಅದಕ್ಕೆ ಅಗತ್ಯವಿರುವ ಶ್ಯೂರಿಟಿಯನ್ನು ಸಾಲ ನೀಡುವ ಸಂಸ್ಥೆಗೆ ಸರ್ಕಾರ ನೀಡಲಿದೆ. ಅಲ್ಲದೆ, ನಿಗಮಗಳು ಪಡೆಯುವ ಸಾಲವನ್ನು ಸರ್ಕಾರ ಕಾಲಕಾಲಕ್ಕೆ ತೀರಿಸಲಿದೆ.

ಸಾಲ ಪಡೆದರೂ ನೀಗಲ್ಲ ಆರ್ಥಿಕ ಸಂಕಷ್ಟ: ಸಾರಿಗೆ ನೌಕರರ ಭವಿಷ್ಯ ನಿಧಿ ಬಾಕಿ ಮತ್ತು ಇಂಧನ ಪೂರೈಕೆದಾರರ ಬಾಕಿ ಪಾವತಿಸುವ ಸಲುವಾಗಿಯೇ ನಿಗಮಗಳಿಗೆ ಸಾಲ ಪಡೆಯಲು ಅನುಮತಿಸಲಾಗಿದೆ. ಆದರೆ, ಸರ್ಕಾರ ಅನುಮತಿಸಿರುವಷ್ಟು ಸಾಲ ಪಡೆದರೂ ನಿಗಮಗಳ ಆರ್ಥಿಕ ಸಂಕಷ್ಟ ನೀಗುವುದಿಲ್ಲ. 2024ರ ನವೆಂಬರ್‌ ಅಂತ್ಯದವರೆಗೆ 2,994.46 ಕೋಟಿ ರು. ಭವಿಷ್ಯ ನಿಧಿ ಬಾಕಿ ಹಾಗೂ 855 ಕೋಟಿ ರು. ಇಂಧನ ಸರಬರಾಜುದಾರರ ಬಾಕಿ ಪಾವತಿಸಬೇಕಿದೆ. ಸದ್ಯ ಸರ್ಕಾರ 2 ಸಾವಿರ ಕೋಟಿ ರು. ಸಾಲ ಪಡೆಯಲು ಅನುಮತಿ ನೀಡಿದೆಯಾದರೂ ಆ ಮೊತ್ತದಿಂದ ಭವಿಷ್ಯ ನಿಧಿ ಮತ್ತು ಇಂಧನ ಸರಬರಾಜುದಾರರ ಬಾಕಿಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಇನ್ನೂ 1,849 ಕೋಟಿ ರು. ಬೇಕಿದೆ.

₹6,244.29 ಕೋಟಿ ಹೊಣೆಗಾರಿಕೆ

ನಾಲ್ಕೂ ಸಾರಿಗೆ ನಿಗಮಗಳು ನವೆಂಬರ್‌ ಅಂತ್ಯದವರೆಗೆ ₹6,468.34 ಕೋಟಿ ಹೊಣೆಗಾರಿಕೆಯನ್ನು ಹೊಂದಿದ್ದವು. ಅದರಲ್ಲಿ ನಿವೃತ್ತ ನೌಕರರ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಾಕಿ ಸೇರಿ ಮತ್ತಿತರ ಬಾಕಿಯೂ ಸೇರಿತ್ತು. ಆದರೆ, ಡಿಸೆಂಬರ್‌ ತಿಂಗಳಲ್ಲಿ ನಿವೃತ್ತ ನೌಕರರಿಗೆ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಬಾಕಿ ಮೊತ್ತ ₹224.05 ಕೋಟಿ ಪಾವತಿಸಲಾಗಿದೆ. ಹೀಗಾಗಿ ಸದ್ಯಕ್ಕೆ ನಿಗಮಗಳ ಮೇಲಿನ ಹೊಣೆಗಾರಿಕೆ ₹6,224.29 ಕೋಟಿಗಳಷ್ಟಾಗಿದೆ.

ಅಲ್ಲದೆ, ನಿಗಮಗಳ ಹೊಣೆಗಾರಿಕೆ ಪೈಕಿ 2023ರ ಮಾರ್ಚ್‌ವರೆಗೆ ₹4,099.38 ಕೋಟಿಗಳಷ್ಟಿದ್ದರೆ, 2023ರ ಏಪ್ರಿಲ್‌ನಿಂದ 2024ರ ನವೆಂಬರ್‌ವರೆಗೆ ₹2,368.96 ಕೋಟಿ ಸೇರ್ಪಡೆಯಾಗಿದೆ.

2019-20ರಿಂದ 2023-24ರವೆಗಿನ ನಿಗಮಗಳ ನಷ್ಟದ ವಿವರ:

ನಿಗಮ ನಷ್ಟದ ಪ್ರಮಾಣ (ಕೋಟಿ ರು.ಗಳಲ್ಲಿ)

ಕೆಎಸ್ಸಾರ್ಟಿಸಿ 1,500.34

ಬಿಎಂಟಿಸಿ 1,544.62

ಎನ್‌ಡಬ್ಲ್ಯುಕೆಆರ್‌ಟಿಸಿ 1,386.75

ಕೆಕೆಆರ್‌ಟಿಸಿ 777.64

ಒಟ್ಟು 5,209.35

ನಿಗಮಗಳ ಮೇಲಿನ ಹೊಣೆಗಾರಿಕೆ: (ನವೆಂಬರ್‌ ಅಂತ್ಯದವರೆಗೆ)

ವಿವರ ಮೊತ್ತ (ಕೋಟಿ ರು.ಗಳಲ್ಲಿ)

ಭವಿಷ್ಯನಿಧಿ 2,994.46

ನಿವೃತ್ತ ನೌಕರರ ಬಾಕಿ 625.40

ಹಾಲಿ ನೌಕರರ ಬಾಕಿ 314.81

ಇಂಧನ ಸರಬರಾಜು ಬಾಕಿ 855

ಇತರ ಬಾಕಿ 883.13

ಸಾಲ 799.47

ಒಟ್ಟು 6,468.34

ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ₹2 ಸಾವಿರ ಕೋಟಿ ಸರ್ವೀಸ್‌ ಲೋನ್‌ ಪಡೆಯಲು ಸರ್ಕಾರ ಅನುಮತಿಸಿದೆ. ಆ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಅಲ್ಲದೆ, ಆ ಸಾಲದ ಮೊತ್ತದಿಂದ ಭವಿಷ್ಯ ನಿಧಿ ಬಾಕಿ ಮತ್ತು ಇಂಧನ ಸರಬರಾಜು ಬಾಕಿ ಪಾವತಿಸಲಾಗುವುದು.

-ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ