ಸಾರಾಂಶ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರೀ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ಇದೀಗ ಕರಾವಳಿ ಪ್ರದೇಶಗಳಲ್ಲಿ ಫೆ.26 ಮತ್ತು 27ರಂದು ಉಷ್ಣ ಅಲೆ (ಹೀಟ್ ವೇವ್) ಎಚ್ಚರಿಕೆ ಘೋಷಿಸಲಾಗಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಭಾರೀ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ಇದೀಗ ಕರಾವಳಿ ಪ್ರದೇಶಗಳಲ್ಲಿ ಫೆ.26 ಮತ್ತು 27ರಂದು ಉಷ್ಣ ಅಲೆ (ಹೀಟ್ ವೇವ್) ಎಚ್ಚರಿಕೆ ಘೋಷಿಸಲಾಗಿದೆ.
ಹಳದಿ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಈ ಎರಡು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರಿಗೆ ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಇರುವುದು, ನೇರ ಬಿಸಿಲು/ ಬಿಸಿ ಗಾಳಿಗೆ ಮೈ ಒಡ್ಡದಿರುವುದು ಸೇರಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಸೂಚನೆ ನೀಡಲಾಗಿದೆ.
ಉಷ್ಣ ಅಲೆಯ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಪಮಾನ ಬುಧವಾರ ಭಾರೀ ಏರಿಕೆ ಕಂಡಿದೆ. ಫೆಬ್ರವರಿ ತಿಂಗಳಲ್ಲೇ ಅತ್ಯಂತ ಗರಿಷ್ಠ 38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಕಂಡುಬರುವ ಉಷ್ಣಾಂಶ ಈಗಲೇ ದಾಖಲಾಗಿರುವುದು ಆತಂಕ ಹೆಚ್ಚಿಸಿದೆ. ಅಕಾಲಿಕ ಮಳೆ ಸಾಧ್ಯತೆ ಇರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.