ಪಿಯು ಟಾಪರ್‌ಗಳಿಬ್ಬರಿಗೆ ಜಮೀರ್‌ 5 ಲಕ್ಷ ರು. , ಸ್ಕೂಟಿ ಉಡುಗೊರೆ!

| N/A | Published : May 04 2025, 11:00 AM IST

zameer ahmed khan

ಸಾರಾಂಶ

ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಇಬ್ಬರಿಗೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ತಲಾ ₹5 ಲಕ್ಷ ನಗದು ಮತ್ತು ಒಂದು ಸ್ಕೂಟಿಯನ್ನು ಬಹುಮಾನವಾಗಿ ನೀಡಿದ್ದಾರೆ.

ಹೊಸಪೇಟೆ : ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿಜಯನಗರ ಜಿಲ್ಲೆಯ ಸಂಜನಾಬಾಯಿ ಮತ್ತು ಕೆ.ನಿರ್ಮಲಾ ಅವರಿಗೆ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ತಲಾ ₹5 ಲಕ್ಷ ನಗದು ಮತ್ತು ಒಂದು ಸ್ಕೂಟಿಯನ್ನು ಬಹುಮಾನವಾಗಿ ನೀಡಿದ್ದಾರೆ.

ವಿದ್ಯಾರ್ಥಿನಿಯರನ್ನು ಸ್ಕೂಟಿಯಲ್ಲಿ ಕೂರಿಸಿಕೊಂಡು ಒಂದು ರೌಂಡ್‌ ಹೊಡೆದ ಜಮೀರ್‌, ಲೈಸೆನ್ಸ್‌ ಸಿಗುವವರೆಗೆ ಸ್ಕೂಟಿಯನ್ನು ಅವರ ತಂದೆ, ತಾಯಿಗಳಿಗೆ ನೀಡಲು ತಿಳಿಸಿದರು. ಅಲ್ಲದೆ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕೊಟ್ಟೂರಿನ ನಾಗಲಕ್ಷ್ಮಿ ಹಾಗೂ ಕೂಡ್ಲಿಗಿಯ ಯಲ್ಲಮ್ಮ ಅವರಿಗೆ ತಲಾ ₹50 ಸಾವಿರ ವಿತರಿಸಿದರು.

ಇದೇ ವೇಳೆ, ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 624 ಅಂಕ ಗಳಿಸಿರುವ ಯಶವಂತ್‌ ಮತ್ತು 625ಕ್ಕೆ 622 ಅಂಕ ಗಳಿಸಿರುವ ಹರಪನಹಳ್ಳಿ ಬಾಲಕ ನಿಹಾರ್ ಅವರಿಗೆ ತಲಾ ₹1 ಲಕ್ಷ ಮತ್ತು ಸ್ಕೂಟಿ ನೀಡುವುದಾಗಿ ಘೋಷಿಸಿದರು. ಜೊತೆಗೆ, ವಿದ್ಯಾರ್ಥಿಗಳಾದ ಎನ್.ಆರ್.ಅಭಿಷೇಕ್, ಹೇಮಂತ್ ಮತ್ತು ಲಕ್ಷ್ಮೀ, ಜಿ.ಎ.‌ಉಮೇಶ್ ಅವರು ತಲಾ 621 ಅಂಕ ಗಳಿಸಿದ್ದು, ಅವರಿಗೂ ಸ್ಕೂಟಿ ನೀಡುವುದಾಗಿ ಘೋಷಿಸಿದರು.