ಮುಂಗಾರು 2ನೇ ಅವಧೀಲಿ 80%ವರೆಗೂ ಮಳೆ ಕೊರತೆ

| N/A | Published : Aug 04 2025, 06:51 AM IST

rain alart in patna

ಸಾರಾಂಶ

ಮುಂಗಾರು ಅವಧಿಯ ದ್ವಿತೀಯಾರ್ಧದಲ್ಲಿ ರಾಜ್ಯದಲ್ಲಿ ಭಾರೀ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು : ಮುಂಗಾರು ಅವಧಿಯ ದ್ವಿತೀಯಾರ್ಧದಲ್ಲಿ ರಾಜ್ಯದಲ್ಲಿ ಭಾರೀ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಸಕ್ತ ಮುಂಗಾರು ಅವಧಿಯ ಮೊದಲಾರ್ಧ ಜುಲೈ ಅಂತ್ಯಕ್ಕೆ ಮುಕ್ತಾಯಗೊಂಡಿದ್ದು, ದ್ವಿತೀಯಾರ್ಧದ ಆಗಸ್ಟ್ ಮತ್ತು ಸೆಪ್ಟೆಂಬರ್‌ ತಿಂಗಳಿನ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಇದೀಗ ಬಿಡುಗಡೆ ಮಾಡಿದ್ದು, ಒಟ್ಟಾರೆ ದೇಶದಲ್ಲಿ ವಾಡಿಕೆಯ ಮಳೆ ಬಂದರೂ ರಾಜ್ಯದ ಪಾಲಿಗೆ ಮಳೆ ಕೊರತೆಯಾಗುವ ಸಾಧ್ಯತೆ ಎಂದು ತಿಳಿಸಿದೆ.

ಆಗಸ್ಟ್‌ನಲ್ಲಿ ಕರಾವಳಿ, ಮಲೆನಾಡು ಸೇರಿ ರಾಜ್ಯದಲ್ಲಿ ಶೇ.50ರಷ್ಟು ಮಳೆ ಕೊರತೆ ಕಂಡು ಬರಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಈ ಮಳೆ ಕೊರತೆ ಪ್ರಮಾಣ ಶೇ.80ರಷ್ಟು ಇರಲಿದೆ. ಸೆಪ್ಟೆಂಬರ್‌ನಲ್ಲಿ ಒಳನಾಡು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಸುಧಾರಿಸಲಿದೆ. ಆದರೆ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.11ರಷ್ಟು ಹೆಚ್ಚಾಗಿದೆ. ಕರಾವಳಿಯಲ್ಲಿ ಶೇ.18, ಉತ್ತರ ಒಳನಾಡಿನಲ್ಲಿ ಶೇ.22ರಷ್ಟು ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಶೇ.1ರಷ್ಟು ಕೊರತೆ ಕಂಡು ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ.58ರಷ್ಟು ಮಳೆ ಕೊರತೆ ಉಂಟಾಗಿದೆ. ರಾಮನಗರ ಶೇ.49, ಹಾಸನ ಶೇ.47 ರಷ್ಟು, ಬೆಂಗಳೂರು ನಗರ ಶೇ.36, ಕೋಲಾರ ಶೇ.34, ತುಮಕೂರು ಶೇ.28, ಶಿವಮೊಗ್ಗ ಶೇ.22 ಹಾಗೂ ಚಿಕ್ಕಬಳ್ಳಾಪುರದಲ್ಲಿ ಶೇ.18 ರಷ್ಟು ಮಳೆ ಕೊರತೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

- ಮುಂಗಾರು ಅವಧಿಯ ಮೊದಲಾರ್ಧ ಜುಲೈ ಅಂತ್ಯಕ್ಕೆ ಮುಗಿದಿದೆ. ವಾಡಿಕೆಗಿಂತ 11% ಅಧಿಕ ಮಳೆ ಸುರಿದಿದೆ

- ಆಗಸ್ಟ್‌ನಿಂದ ಮುಂಗಾರಿನ 2ನೇ ಅವಧಿ ಆರಂಭ. ದೇಶಾದ್ಯಂತ ವಾಡಿಕೆಯ ಮಳೆ ಆದರೂ ರಾಜ್ಯದಲ್ಲಿ ಕೊರತೆ

- ಆಗಸ್ಟ್‌ನಲ್ಲಿ ರಾಜ್ಯಾದ್ಯಂತ 50% ಮಳೆ ಕೊರತೆ. ಕರಾವಳಿ, ಮಲೆನಾಡಿನಲ್ಲಿ ಶೇ.80ರಷ್ಟು ಕೊರತೆ ಸಂಭವ

- ಸೆಪ್ಟೆಂಬರ್‌ನಲ್ಲಿ ಒಳನಾಡಲ್ಲಿ ಉತ್ತಮ ಮಳೆ. ಕರಾವಳಿ, ಮಲೆನಾಡಲ್ಲಿ ಕೊರತೆ: ಹವಾಮಾನ ಇಲಾಖೆ

Read more Articles on