ಸಾರಾಂಶ
ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ, ಸಾಹಸ ಪ್ರದರ್ಶನಗಳ ವಿಶೇಷತೆಗಳು.
ಬೆಂಗಳೂರು : ದೇಶಭಕ್ತಿ ಸಾರಿದ ನೃತ್ಯಗಳು, ದೇಶಕ್ಕಾಗಿ ವೀರ ಮರಣ ಅಪ್ಪಿದ ಕಲಿಗಳನ್ನು ಸ್ಮರಣೆ, ಸಮಾನತೆ ಭಾವೈಕ್ಯತೆಯ ರೂಪಕಗಳು, ನಾಡಿನ ರಕ್ಷಣೆ ಮಾಡುವ ವಿವಿಧ ರಕ್ಷಣಾ ಪಡೆಗಳ ಆಕರ್ಷಕ ಪಥ ಸಂಚಲನ, ಕುದುರೆ ಮೇಲೆ ಸಾಹಸ ಪ್ರದರ್ಶನ ನೀಡಿದ ಕಮಾಂಡಗಳು, ಮೈ ನವಿರೇಳಿಸುವ ರೀತಿಯಲ್ಲಿ ಭಯೋತ್ಪಾದಕರ ಸದೆಬಡಿದ ‘ಗರುಡ ಪಡೆ’....
ಇದು ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಅಂಗವಾಗಿ ನಡೆದ ವಿವಿಧ ಸಾಂಸ್ಕೃತಿಕ, ಸಾಹಸ ಪ್ರದರ್ಶನಗಳ ವಿಶೇಷತೆಗಳು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ರಾಷ್ಟ್ರ ಧ್ವಜ ಅನಾವರಣ ಮಾಡಿ, ಗೌರವ ರಕ್ಷೆ ಸ್ವೀಕರಿಸಿದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾವಿರಾರು ಜನರ ಮೆಚ್ಚುಗೆಗೆ ಪಾತ್ರವಾದವು.
ಪರೇಡ್ ಕಮಾಂಡರ್‌ಗಳ ನೇತೃತ್ವದಲ್ಲಿ ಕೆಎಸ್ಆರ್‌ಪಿ, ಬಿಎಸ್ಎಫ್, ಶ್ವಾನದಳ, ಸಿವಿಲ್ ಡಿಫೆನ್ಸ್, ಎನ್‌ಸಿಸಿ ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಯ 38 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಶ್ವಾನ ದಳ, ಸಮರ್ಥಂ ಹಾಗೂ ರಮಣಶ್ರೀ ತಂಡಗಳ ಶಿಸ್ತುಬದ್ಧ ಕವಾಯತು ಎಲ್ಲರ ಗಮನ ಸಳೆಯಿತು. ಪಥ ಸಂಚಲನದಲ್ಲಿ ಒಟ್ಟು 1150 ಮಂದಿ ಭಾಗಿಯಾಗಿದ್ದರು. ‘ಗೋರ್ಖಾ ರೈಫಲ್ಸ್‌ನ ಖುಕ್ರಿ ನೃತ್ಯ, ಪಂಜಾಬ್ ಪರಂಪರೆ ಬಿಂಬಿಸುವ ಭಾಂಗ್ರ ನೃತ್ಯ, ಮೈಸೂರು ಕೆಎಸ್‌ಆರ್‌ಪಿ ಮೌಟೆಂಡ್ ಪೊಲೀಸ್ ತಂಡದ ಟೆಂಟ್ ಪೆಗ್ಗಿಂಗ್’ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು.
ಭಾವೈಕ್ಯತೆ ಸಾರಿದ ಮಕ್ಕಳು:
ಬೆಂಗಳೂರು ದಕ್ಷಿಣ ವಲಯದ ಅಗರದ ‘ಕರ್ನಾಟಕ ಪಬ್ಲಿಕ್ ಶಾಲೆ ಸೇರಿ ವಿವಿಧ ಶಾಲೆಗಳ 800 ವಿದ್ಯಾರ್ಥಿಗಳಿಂದ ಮಕ್ಕಳು ‘ನಾವೆಲ್ಲರೂ ಒಂದೇ ನಾವು ಭಾರತೀಯರು’ ಗೀತೆಗೆ ನೃತ್ಯ ರೂಪಕ ಪ್ರದರ್ಶಿಸಿದರು. ಬಣ್ಣ ಬಣ್ಣದ ಉಡುಪು ಧರಿಸಿ, ದೇಶಕ್ಕಾಗಿ ವೀರಣ ಮರಣ ಹೊಂದಿದ್ದ ವೀರಕಲಿಗಳು, ಪ್ರಜಾಪ್ರಭುತ್ವ ಮತ್ತು ದೇಶಭಕ್ತಿ ಮಹತ್ವದ ಬಗ್ಗೆ ನೃತ್ಯ ಮೂಲಕ ಸಭಿಕರಿಗೆ ತಿಳಿಸಿಕೊಟ್ಟರು. ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸೇರಿ ವಿವಿಧ ಕಾಲೇಜುಗಳ 650 ಮಕ್ಕಳು ‘ಅರಿವೇ ಅಂಬೇಡ್ಕರ್’ ಗೀತೆಗೆ ನೃತ್ಯ ಪ್ರದರ್ಶಿಸಿದರು. ತರಹೇವಾರಿ ಉಡುಪು ಧರಿಸಿದ ಮಕ್ಕಳು ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸಿದರು. ಪೊಲೀಸ್ ಇಲಾಖೆಯಿಂದ ಎರಡು ಹಾಗೂ ಸೇನಾ ಇಲಾಖೆಯಿಂದ 3 ಕಾರ್ಯಕ್ರಮ ಜರುಗಿದವು.
ಗರುಡ ಪಡೆ ಸಾಹಸಕ್ಕೆ ಎಲ್ಲರ ಸಲಾಂ:
ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಬಸ್ ಅಡ್ಡಗಟ್ಟಿದ ಭಯೋತ್ಪಾದಕರು ಹೈಜಾಕ್ ಮಾಡಿ ಪ್ರಯಾಣಿಕರನ್ನು ಒತ್ತೆಯಾಳಾಗಿಸಿಕೊಂಡಿದ್ದರು. ಈ ವೇಳೆ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸಿದ ‘ಗರುಡ ಪಡೆ’ ಯೋಧರು ಪ್ರಯಾಣಿಕರನ್ನು ರಕ್ಷಿಣಿಸಿ ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಿದ್ದರು. ಈ ಕಾರ್ಯಚರಣೆಯ ಅಣಕು ದೃಶ್ಯವನ್ನು ಮೈದಾನದಲ್ಲಿ ಪ್ರಸ್ತುತಪಡಿಸಲಾಯಿತು. ಬೆಂಗಳೂರಿನಿಂದ ಮೈಸೂರಿಗೆ ಹೊರತ್ತಿದ್ದ ಬಸ್ ಏಕಾಏಕಿ ಭಯೋತ್ಪಾದರಿದ್ದ ಓಮಿನಿ ಕಾರು ಅಡ್ಡಗಿಟ್ಟಿದ್ದರು. ಆಗ ಕ್ಷಿಪ್ರಗತಿಯಲ್ಲಿ ಧಾವಿಸಿದ ಗರುಡ ಪಡೆಯ ಯೋಧರು ಬಸ್ ಒಳಗೆ ನುಗ್ಗಿ ಭಯೋತ್ಪಾದಕರ ಎದೆಗೆ ಗುಂಡಿಟ್ಟರು. ಈ ವೇಳೆ ಗರುಡ ಪಡೆಯ ಶ್ವಾನವು ಭಯೋತ್ಪಾದಕನ ತೋಳನ್ನು ಕಚ್ಚುವ ಮೂಲಕ ಸೈನಿಕರಿಗೆ ನೆರವಾಯಿತು. ಅಣಕು ಕಾರ್ಯಾಚರಣೆ ವೇಳೆ ಮೈದಾನದಲ್ಲಿ ಸಿಡಿಸಿದ ಬಾಂಬ್, ಬುಲೆಟ್ ಮಾದರಿಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕರ್ನಾಟಕ ಪಬ್ಲಿಕ್ ಶಾಲೆಗೆ ಪ್ರಥಮ ಬಹುಮಾನ:
ನಾವೆಲ್ಲರೂ ಒಂದೇ ನಾವು ಭಾರತೀಯರು ನೃತ್ಯರೂಪಕ ದರ್ಶನ ನೀಡಿದ ಬೆಂಗಳೂರು ದಕ್ಷಿಣ ವಲಯದ ಅಗರದ ಕರ್ನಾಟಕ ಪಬ್ಲಿಕ್ ಶಾಲೆಗೆ ಪ್ರಥಮ ಬಹುಮಾನ, ಅರಿವೇ ಅಂಬೇಡ್ಕರ್ ನೃತ್ಯ ರೂಪಕ ಪ್ರದರ್ಶನ ನೀಡಿದ ಹೇರೋಹಳ್ಳಿಯ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ಲಭಿಸಿತು.
ಪಥ ಸಂಚಲನದಲ್ಲಿ ಬಹುಮಾನ ವಿವರ:
ಗ್ರೂಪ್-1 ವಿಭಾಗದಲ್ಲಿ ಸೇನಾ ಪಡೆ ಪ್ರಥಮ ಬಹುಮಾನ ಲಭಿಸಿದ್ದು, ಬಿಎಸ್‌ಎಫ್, ಏರ್‌ಪೋರ್ಸ್ ಮತ್ತು ಕೆಎಸ್‌ಆರ್‌ಪಿ ಕ್ರಮವಾಗಿ ಎರಡು ಮೂರು ಮತ್ತು ನಾಲ್ಕನೇ ಬಹುಮಾನ ಲಭಿಸಿದೆ. ಗ್ರೂಪ್-2 ನಲ್ಲಿ ಅಗ್ನಿಶಾಮಕ ದಳಕ್ಕೆ ಪ್ರಥಮ ಬಹುಮಾನ, ಎನ್‌ಸಿಸಿಗೆ ದ್ವಿತೀಯ ಬಹುಮಾನ. ಗ್ರೂಪ್ -3ನಲ್ಲಿ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ಗೆ ಪ್ರಥಮ ಬಹುಮಾನ, ಮಿತ್ರ ಅಕಾಡೆಮಿಗೆ ದ್ವಿತೀಯ ಬಹುಮಾನ ಹಾಗೂ ಅಬಕಾರಿ ಇಲಾಖೆಗೆ ಮೂರನೇ ಬಹುಮಾನ, ಗ್ರೂಪ್-4 ಬಾಪು ಹೈಸ್ಕೂಲ್ ಪ್ರಥಮ, ಲಿಟಲ್ ಫ್ಲವರ್ ಪಬ್ಲಿಕ್ ಸ್ಕೂಲ್ ದ್ವಿತೀಯ ಬಹುಮಾನ, ಗ್ರೂಪ್-6 ವಿಭಾಗದಲ್ಲಿ ಧಾರವಾಡದ ಎನ್.ಎ.ಮುತ್ತಣ್ಣ ಮೆಮೋರಿಯಲ್ ಶಾಲೆ ಪ್ರಥಮ ಬಹುಮಾನ, ನಂದಿನಿ ಲೇಔಟ್‌ನ ಪ್ರೆಸಿಡೆನ್ಸಿ ಶಾಲೆಗೆ ದ್ವಿತೀಯ ಬಹುಮಾನ, ಗ್ರೂಪ್-7 ನಾರಾಯಣಪುರದ ಕ್ರಿಸ್ತೂ ಜಯಂತಿ ಸ್ಕೂಲ್ ಪ್ರಥಮ ಬಹುಮಾನ, ಕೋರಮಂಗಲದ ಪೊಲೀಸ್ ಪಬ್ಲಿಕ್ ಶಾಲೆಗೆ ದ್ವಿತೀಯ ಬಹುಮಾನ ಲಭಿಸಿದೆ.
ಇದೇ ವೇಳೆ ಕೇರಳ ಪೊಲೀಸ್ ತಂಡಕ್ಕೆ ಹಾಗೂ ಶ್ವಾನ ದಳ, ರಮಣ ಮಹರ್ಷಿ, ಸಮರ್ಥನಂ ಸೇರಿದಂತೆ ಕವಾಯತು ಹಾಗೂ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.