ಸಾರಾಂಶ
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಾಗೂ ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ (46) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಾಗೂ ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ (46) ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಹಂಸ ಮೊಯ್ಲಿ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದರು. ಶನಿವಾರ ರಾತ್ರಿ ಉಸಿರಾಟ ಸಮಸ್ಯೆಯಿಂದ ಏಕಾಏಕಿ ಅಸ್ವಸ್ಥಗೊಂಡ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಛತ್ತೀಸ್‌ಘಡ ಪ್ರವಾಸಲ್ಲಿದ್ದ ವೀರಪ್ಪ ಮೊಯ್ಲಿ ಅವರು ಪುತ್ರಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶನಿವಾರ ರಾತ್ರಿಯೇ ಬೆಂಗಳೂರಿಗೆ ವಾಪಸಾಗಿದ್ದಾರೆ. ಮೃತ ಹಂಸ ಮೊಯ್ಲಿ ಭರತನಾಟ್ಯ ಕಲಾವಿದೆ ಆಗಿದ್ದು, ಪ್ರಾಯೋಗಿಕ ನೃತ್ಯ ಸಂಯೋಜಕಿ ಆಗಿಯೂ ಕೆಲಸ ಮಾಡುತ್ತಿದ್ದರು. ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳಿನ ‘ಶೃಂಗಾರಂ’ ಸಿನಿಮಾದಲ್ಲಿಯೂ ನಟಿಸಿದ್ದರು. ಈ ಮೂಲಕ ಕೇವಲ ನೃತ್ಯಗಾತಿ ಮಾತ್ರವಲ್ಲದೇ ಚಲನಚಿತ್ರ ನಟಿ ಆಗಿಯೂ ಗುರುತಿಸಿಕೊಂಡಿದ್ದರು.
ವೀರಪ್ಪಮೊಯ್ಲಿ ಅವರ ಮೂರನೇ ಪುತ್ರಿಯಾಗಿದ್ದ ಹಂಸ ಹಲವು ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು.