ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಮಹಿಳಾ ದೌರ್ಜನ್ಯ ಸಾಮಾನ್ಯ : ಡಾ.ಜಿ. ಪರಮೇಶ್ವರ್‌

| N/A | Published : Apr 08 2025, 09:34 AM IST

Dr G parameshwar

ಸಾರಾಂಶ

ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಅದು ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

 ಬೆಂಗಳೂರು/ನವದೆಹಲಿ : ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಅಲ್ಲೊಂದು ಇಲ್ಲೊಂದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಅದು ಸ್ವಾಭಾವಿಕವಾಗಿ ಜನರ ಗಮನ ಸೆಳೆಯುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಅದು ವಿವಾದಕ್ಕೆ ಕಾರಣವಾಗಿದೆ. ವಿವಾದಾತ್ಮಕ ಹೇಳಿಕೆ ನೀಡಿರುವ ಪರಮೇಶ್ವರ್‌ ಅವರಿಂದ ಕಾಂಗ್ರೆಸ್ ವರಿಷ್ಠರು ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸೋಮವಾರ ಬಿಟಿಎಂ ಲೇಔಟ್‌ನಲ್ಲಿ ಯುವತಿಯರ ಮೇಲೆ ಬೀದಿಕಾಮಣ್ಣನೊಬ್ಬ ನಡುರಾತ್ರಿ ನಡುರಸ್ತೆಯಲ್ಲಿ ಎರಗಿದ್ದ. ಈ ವಿಡಿಯೋ ವೈರಲ್‌ ಆಗಿತ್ತು. ಈ ಕುರಿತು ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌ ಅವರು, ದೊಡ್ಡ ನಗರದಲ್ಲಿ ಅಲ್ಲೊಂದು-ಇಲ್ಲೊಂದು ಅಪರಾಧಿ ಕೃತ್ಯ ನಡೆಯುತ್ತವೆ. ಇಂತಹ ಕೃತ್ಯಗಳು ಇನ್ನಷ್ಟು ಕಡಿಮೆ ಮಾಡಲು ಪೊಲೀಸರಿಗೆ ಹಲವು ನಿರ್ದೇಶನ ನೀಡಿದ್ದೇನೆ ಎಂದು ಹೇಳಿದರು. ಆದರೆ ಇದು ರಾಷ್ಟ್ರೀಯ ಬಿಜೆಪಿ ಆಕ್ರೋಶಕ್ಕೆ ಗುರಿಯಾಯಿತು.

ಈ ಕುರಿತು ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ‘ಜಿ. ಪರಮೇಶ್ವರ ಅವರು ಅಪರಾಧ ಕೃತ್ಯಗಳ ಸರಣಿ ಸಮರ್ಥಕರು. 2017ರಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಿಯಾಂಕಾ ವಾದ್ರಾ ‘ಲಡ್ಕಿ ಹೂಂ ಲಡ್ ಸಕ್ತಿ ಹೂಂ’ (ನಾನು ಹುಡುಗಿ, ನಾನು ಹೋರಾಡಬಲ್ಲೆ) ಅಭಿಯಾನ ನಡೆಸಿದ್ದರು. ಅದು ಕೇವಲ ಘೋಷಣೆಯೇ? ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಮೌನ ಮುರಿದು, ಪರಮೇಶ್ವರ ಅವರಿಂದ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಮಹಾಭಾರತದಲ್ಲಿ ಪಾಂಡವರು-ಕೌರವರ ನಡುವೆ ಸಮರಕ್ಕೆ ಕಾರಣವಾದ ದ್ರೌಪದಿ ಮೇಲೆ ನಡೆದ ಅವಮಾನವನ್ನೂ ಸಣ್ಣ ಘಟನೆ ಎಂದು ಪರಮೇಶ್ವರ್‌ ಅವರು ಹೇಳಿಬಿಡುತ್ತಿದ್ದರು ಎಂದು ಅವರು ಮೂದಲಿಸಿದ್ದಾರೆ.

 ನಗರದಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆ ಚೆನ್ನಾಗಿ ಆಗಬೇಕು. ಪ್ರತಿ ಬಡಾವಣೆಯಲ್ಲೂ ಪೆಟ್ರೋಲಿಂಗ್‌ ಅನ್ನು ಶಿಸ್ತು ಮತ್ತು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಪೊಲೀಸ್‌ ಕಮಿಷನರ್‌ಗೆ ಸೂಚಿಸಿದ್ದೇನೆ. ಪ್ರಕರಣದ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದು ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿದ್ದೇನೆ ಎಂದರು. .

ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್‌, ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ಕೊಟ್ಟಿದ್ದೇವೆ. ಗ್ಯಾರಂಟಿ ಯೋಜನೆ ಜನಮನ್ನಣೆ ಪಡೆದಿದ್ದು ಅದನ್ನು ಸಹಿಸಿಕೊಳ್ಳಲು ಬಿಜೆಪಿಗರಿಗೆ ಆಗುತ್ತಿಲ್ಲ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡದಿದ್ದರೆ ನಾವು ಕಳೆದು ಹೋಗುತ್ತೇವೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.