ಸಾರಾಂಶ
ವಾಂತಿ-ಭೇದಿಗೆ ಮೂವರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ಇದೇ ವೇಳೆ, 15ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಸುರಪುರ/ಕೆಂಭಾವಿ : ವಾಂತಿ-ಭೇದಿಗೆ ಮೂವರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ಇದೇ ವೇಳೆ, 15ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ನಿರ್ಮಿಸಲಾದ ಕಿರುನೀರು ಸರಬರಾಜು ಗುಮ್ಮಿಗಳು ತಿಪ್ಪೆ ಗುಂಡಿಯಲ್ಲಿದ್ದು, ಇಲ್ಲಿನ ನೀರು ಕಲುಷಿತಗೊಂಡಂತೆ ಕಂಡು ಬರುತ್ತಿದೆ. ಇಲ್ಲಿ ನೀರು ಶುದ್ಧೀಕರಣ ಘಟಕವೊಂದಿದ್ದು, ಅದು ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿದೆ. ನೀರಿನ ತೊಟ್ಟಿಗಳನ್ನು ಹಲವಾರು ತಿಂಗಳಿಂದ ಸ್ವಚ್ಛಗೊಳಿಸದಿರುವ ಕಾರಣ ತೊಟ್ಟಿಯಲ್ಲಿ ಹುಳುಗಳು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಗ್ರಾಮದಲ್ಲಿ ವಾಂತಿ-ಭೇದಿ ಉಲ್ಬಣಗೊಂಡಿದ್ದು, ಹಲವರು ಆಸ್ಪತ್ರೆಗೆ ಸೇರಿದ್ದಾರೆ. ಈ ಮಧ್ಯೆ, ಹತ್ತು ದಿನಗಳ ಹಿಂದೆ ವಾಂತಿ-ಭೇದಿಯಿಂದ ಖಾಸಗಿ ಹಾಗೂ ಬೇರೆ, ಬೇರೆ ಸರ್ಕಾರಿ ಆಸ್ಪತ್ರೆಗೆ ಹಲವರು ದಾಖಲಾಗಿದ್ದರು. ಈ ಪೈಕಿ ಗ್ರಾಮದ ದೇವಿಕೆಮ್ಮ ಹೊಟ್ಟಿ (60), ವೆಂಕಮ್ಮ (50) ಹಾಗೂ ರಾಮಣ್ಣ ಪೂಜಾರಿ (64) ಎಂಬುವರು ಸೋಮವಾರ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಇವರ ಸಾವಿಗೆ ಕಲುಷಿತ ನೀರು ಸೇವನೆಯೇ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ನೀರಿನ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.