ಸಾರಾಂಶ
ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿಗೆ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ
ಬೆಂಗಳೂರು : ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿಗೆ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಹಾಗಾಗಿ ಬಿಬಿಎಂಪಿ, ಬೆಸ್ಕಾಂ, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲಾ ಇಲಾಖಾ ಅಧಿಖಾರಿಗಳು ಸಮನ್ವಯದಿಂದ 24/7 ಒಟ್ಟಾಗಿ ಕೆಲಸ ಮಾಡಬೇಕು. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಯಾವುದೇ ಜೀವ, ಆಸ್ತಿ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.
ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಬೆಸ್ಕಾಂ, ಕೆಪಿಟಿಸಿಎಲ್, ಬಿಬಿಎಂಪಿ, ಬಿಡ್ಬ್ಯೂಎಸ್‌ಎಸ್‌ಬಿ, ಅರಣ್ಯ ಇಲಾಖೆ, ಸಂಚಾರಿ ಪೊಲೀಸರು, ಅಗ್ನಿಶಾಮಕದಳ ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಯಾವ ಇಲಾಖೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಎಲ್ಲರೂ ಒಟ್ಟಾಗಿ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಪ್ರಮುಖವಾಗಿ ಬಿಬಿಎಂಪಿಯವರು ದುಸ್ಥಿತಿ ಅಥವಾ ಕುಸಿಯುವ ಹಂತದಲ್ಲಿರುವ ಯಾವುದೇ ಮನೆ, ಇತರೆ ಕಟ್ಟಡಗಳಲ್ಲಿ ವಾಸವಿರುವವರಿಗೆ ನೋಟಿಸ್ ನೋಡಿ ಸ್ಥಳಾಂತರಿಸುವ ಕೆಲಸ ಮಾಡಬೇಕು. ಈಗ ಬಿದ್ದಿರುವ ಮರಗಳ ಜೊತೆಗೆ ಬೀಳಬಹುದಾದ ಮರಗಳ ಬಗ್ಗೆ ಅರಣ್ಯ ಇಲಾಖೆ ಮತ್ತು ಬಿಬಿಎಂಪಿ ಜಂಟಿಯಾಗಿ ಸಮೀಕ್ಷೆ ನಡೆಸಿ ತೆರವುಗೊಳಿಸುವ ಕೆಲಸ ಮಾಡಬೇಕು.
ತಗ್ಗು ವಸತಿ ಪ್ರದೇಶಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕು. ಒಂದು ವೇಳೆ ನೂರು ನುಗ್ಗಿದರೆ ಉತ್ತಮ ಸಾಮರ್ಥ್ಯದ ಪಂಪ್ ಸೆಟ್, ಜನರೇಟರ್ ಗಳು ಹಾಗೂ ಹೆಚ್ಚು ನೀರು ಹರಿಯುವ ರಾಜಕಾಲುವೆ ಬಳಿ ಜೆಸಿಬಿ, ಟಿಪ್ಪರ್‌ಗಳನ್ನು ಮುನ್ನೆಚರಿಕೆ ಕ್ರಮವಾಗಿ ಸಿದ್ಧಮಾಡಿಕೊಂಡಿರಬೇಕು. ಎನ್‌ಡಿಆರ್‌ಎಫ್ ತಂಡದೊಟ್ಟಿಗೂ ಸಂಪರ್ಕದಲ್ಲಿ ಇರಬೇಕೆಂದು ಸೂಚನೆ ನೀಡಲಾಗಿದೆ ಎಂದರು.
694 ರಲ್ಲಿ 525 ದೂರುಗಳಿಗೆ ಪರಿಹಾರ
ಭಾನುವಾರ ಸುರಿದ ಮಳೆಯಿಂದ ಮರ, ರೆಂಬೆ ಕೊಂಬೆ, ವಿದ್ಯುತ್ ಕಂಬ ಧರೆಗುರುಳಿರುವುದು, ಮನೆಗಳಿಗೆ ನೀರು ನುಗ್ಗಿರುವುದು ಸೇರಿದಂತೆ ಸಾರ್ವಜನಿಕರಿಂದ ಬಿಬಿಎಂಪಿ ಕಂಟ್ರೋಲ್ ರೂಂ ಸಂಖ್ಯೆ 1533ಗೆ ಒಟ್ಟು 694 ದೂರುಗಳು ಬಂದಿದ್ದವು. ಈ ಪೈಕಿ 525 ದೂರುಗಳನ್ನು ಪರಿಹರಿಸಲಾಗಿದೆ. 169 ದೂರುಗಳನ್ನು ಪರಿಹರಿಸುವ ಕೆಲಸ ನಡೆಯುತ್ತಿದೆ ಎಂದರು.
ಜೂನ್ ನಲ್ಲಿ ಉತ್ತಮ ಮಳೆ ಬಿದ್ದಿರುವುದನ್ನು ನಗರದ ನಾಗರಿಕರು ಸಂತೋಷದಿಂದ ಸ್ವೀಕರಿಸಿದ್ದಾರೆ. ನನಗೂ ಸಾಕಷ್ಟು ಸಂತೋಷವಾಗಿದೆ. ಆದರೆ, ಮಳೆಯಿಂದ 265 ಮರಗಳು ಬಿದ್ದಿವೆ. ಇದರಲ್ಲಿ 96 ಮರಗಳನ್ನು ತೆರವುಗೊಳಿಸಲಾಗಿದೆ. 365 ಕೊಂಬೆಗಳು ಬಿದ್ದಿದ್ದವು, ಎಲ್ಲವನ್ನು ತೆರವುಗೊಳಿಸಲಾಗಿದೆ. 261 ವಿದ್ಯುತ್ ಕಂಬಗಳು ಬಿದ್ದಿದ್ದವು. ಇದನ್ನು ಸರಿಪಡಿಸಲಾಗುತ್ತಿದೆ. ಒಂದಷ್ಟು ವಾಹನಗಳು ಜಖಂ ಗೊಂಡಿವೆ. ಇದು ಬಿಟ್ಟರೆ ಯಾವುದೇ ಜೀವಹಾನಿಯಾಗಿಲ್ಲ ಎಂದರು.
ಮಳೆ ಬಿದ್ದಾಗ ರಸ್ತೆಗುಂಡಿಗಳನ್ನು ಮುಚ್ಚಿದರೆ ಮತ್ತೆ ಕಿತ್ತು ಹೋಗುವ ಸಾಧ್ಯತೆ ಇರುವ ಕಾರಣ ಈ ಕೆಲಸ ತಡವಾಗಬಹುದು. ಇದೊಂದು ವಿಚಾರ ಹೊರತಾಗಿ ಮಿಕ್ಕ ವಿಚಾರಗಳಲ್ಲಿ ಅಧಿಕಾರಿಗಳು ಸಾಕಷ್ಟು ಎಚ್ಚರಿಕೆ ವಹಿಸಬೇಕು ನಿರ್ದೇಶಿಸಲಾಗಿದೆ ಎಂದರು.
ಕಾರ್ಪೊರೇಟರ್‌ಗಳೂ ಏನ್ ಮಾಡ್ತಾರ್ರೀ?
ಬಿಬಿಎಂಪಿಗೆ ಚುನಾವಣೆ ನಡೆಯದೆ ಸ್ಥಳೀಯ ಜನಪ್ರತಿನಿಧಿಗಳಿಲ್ಲದೆ ಮಳೆ ಹಾನಿ ನಿಭಾಯಿಸುವ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳ ಮೇಲೆ ಬಿದ್ದಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ.ಶಿವಕುಮಾರ್, ‘ಕಾರ್ಪೊರೇಟರ್‌ಗಳು ಏನು ಮಾಡ್ತಾರ್ರೀ, ಅಧಿಕಾರಿ ಇರಲಿ, ಇಲ್ಲದಿರಲಿ ಸಾರ್ವನಿಕ ಜೀವನದಲ್ಲಿರುವವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು’ ಎಂದರು.
ಪ್ರಜಾಪ್ರಭುತ್ವದಲ್ಲಿ ಪಂಚಾಯಿತಿಯಿಂದ ಸಂಸತ್‌ವರೆಗೂ ಜನಪ್ರತಿನಿಧಿಗಳು ಇರಬೇಕು. ಆದರೆ, ಬಿಬಿಎಂಪಿ ಚುನಾವಣೆ ತಡವಾಗಿದೆ. ಈಗ ಲೋಕಸಭಾ ಚುನಾವಣೆ ಮುಗಿದಿದೆ. ಮುಂದೆ ಪಾಲಿಕೆ ಚುನಾವಣೆ ಬಗ್ಗೆ ಯೋಚಿಸೋಣ ಎಂದರು.
ಬಿಬಿಎಂಪಿ ಮೇಲೆ ಒತ್ತಡ ಆಗಿರುವ ಕಾರಣ ವಿಭಜನೆ ಮಾಡುವ ಯೋಚನೆ ಇದೆಯೇ ಎಂದಾಗ ‘ಲೋಕಸಭೆ ಫಲಿತಾಂಶ ಬರಲಿ. ನಂತರ ಶುಭ ಮುಹೂರ್ತ ನೀಡೋಣ’ ಎಂದು ಹೇಳಿದರು.
ಬಹಳ ಸಂತೋಷ: ಇದೇ ವೇಳೆ ಶತ್ರು ಸಂಹಾರ ಯಾಗ, ಪ್ರಾಣಿ ಬಲಿ ಬಗ್ಗೆ ತಾವು ಮಾಡಿದ ಆರೋಪ ಕುರಿತು ಎಚ್.ಡಿ ಕುಮಾರಸ್ವಾಮಿ ಅವರು ಎಸ್ ಐಟಿ ತನಿಖೆ ನಡೆಸಲಿ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಬಹಳ ಸಂತೋಷ’ ಎಂದರು.