ಸಾರಾಂಶ
ಪಶ್ಚಿಮ ಘಟ್ಟ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ. ಇಡೀ ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಭಿಪ್ರಾಯಪಟ್ಟರು.
ಕಾರವಾರ : ಪಶ್ಚಿಮ ಘಟ್ಟ ಕೇವಲ ನಮ್ಮ ದೇಶದಲ್ಲಷ್ಟೇ ಅಲ್ಲ. ಇಡೀ ಜಗತ್ತಿನಲ್ಲೇ ಶ್ರೀಮಂತ ಜೀವ ವೈವಿಧ್ಯ ಹೊಂದಿರುವ ತಾಣವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅಭಿಪ್ರಾಯಪಟ್ಟರು.
ಶಿರಸಿ ಅರಣ್ಯ ಕಾಲೇಜು ಆವರಣದಲ್ಲಿ ಸೋಮವಾರ ‘ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ’ ಕುರಿತ ಕಾರ್ಯಕ್ರಮದಲ್ಲಿ ಅರಣ್ಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ನಾಲ್ಕು ಗೋಡೆಯ ನಡುವೆ ಕಲಿಯುವುದಕ್ಕಿಂತ ವಿಸ್ತಾರವಾದ ಪಶ್ಚಿಮಘಟ್ಟದ ವಾತಾವರಣದಲ್ಲಿ ಅಧ್ಯಯನ ಮಾಡಬಹುದು ಎಂದರು.
ಪರಿಸರ ನಾಶ ಮಾಡಿ ಅಭಿವೃದ್ಧಿ ಚಟುವಟಿಕೆ ನಡೆಸುವ ಬದಲು ಪ್ರಾಕೃತಿಕ ಸೌಹಾರ್ದ ಇಂದಿನ ತುರ್ತು ಅಗತ್ಯವಾಗಿದೆ. ವೈದಿಕ ಯುಗದಿಂದಲೂ ಪರಿಸರ ಮತ್ತು ಅರ್ಥ ವ್ಯವಸ್ಥೆ ಪರಸ್ಪರ ಸಾಗಿವೆ. ಲಭ್ಯ ಇರುವ ನೈಸರ್ಗಿಕ ಸಂಪನ್ಮೂಲ ಬಳಸಿಕೊಂಡು ಅಭಿವೃದ್ಧಿ ಹೊಂದುವ ಗ್ರಾಹಕರು ನಾವಲ್ಲ. ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಮುನ್ನಡೆಯುವ ಬಗ್ಗೆ ವಿಚಾರ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಇಲ್ಲಿಯ ಜನತೆ ಪರಿಸರದೊಂದಿಗೆ ಬದುಕುತ್ತಿದ್ದಾರೆ. ಏಲಕ್ಕಿ, ದಾಲ್ಚಿನ್ನಿ, ಕಾಳುಮೆಣಸು ಸೇರಿದಂತೆ ಹಲವು ಮಸಾಲೆ ಉತ್ಪನ್ನ ಬೆಳೆಯುವ ಫಲವತ್ತಾದ ಭೂಮಿ ಇದಾಗಿದೆ ಎಂದು ಬಣ್ಣಿಸಿದರು.
ನಿಸರ್ಗ ಕೇವಲ ಮನುಷ್ಯನಿಗೆ ಸೀಮಿತವಾಗಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಬೇಕು. ಪ್ರಾಣಿ ಪಕ್ಷಿಗಳಿಗೂ ಅದು ಸಲ್ಲಬೇಕು. ಈಗಿನ ಪೀಳಿಗೆ ಈ ಸತ್ಯದೊಂದಿಗೆ ಅಧ್ಯಯನ ನಡೆಸುತ್ತಾ, ಮುಂದಿನ ಪೀಳಿಗೆಗೂ ಅರಿವು ಮೂಡಿಸಬೇಕು ಎಂದರು. ಅರಣ್ಯ ಶ್ವಾಸಕೋಶ ಇದ್ದಂತೆ. ಶ್ವಾಸಕೋಶ ಸರಿಯಾಗಿದ್ದರೆ ಮಾತ್ರ ಉಸಿರಾಡಬಹುದು. ವಾತಾವರಣದ ಏರುಪೇರು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಈ ಸವಾಲು ಎದುರಿಸಲು ಪರಿಸರ ಉಳಿಸಬೇಕು. ಮನುಷ್ಯನ ಅತಿಯಾಸೆಗೆ ಪರಿಸರ ನಾಶವಾಗುತ್ತಿದ್ದರೆ ಭೂಮಿ ತಾಯಿ ಕ್ಷಮಿಸಲಾರಳು ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಪಾಟೀಲ ಇದ್ದರು. ಅರಣ್ಯ ಕಾಲೇಜಿನ ಡೀನ್ ಆರ್. ವಾಸುದೇವ ಕಾರ್ಯಕ್ರಮ ನಿರ್ವಹಿಸಿದರು.
ಕಾಲೇಜಿನ ಆವರಣದಲ್ಲಿ ಜಗದೀಪ್ ಧನಕರ್ ತಮ್ಮ ತಾಯಿ ಕೇಸರಿದೇವಿ ಹೆಸರಿನಲ್ಲಿ, ಅವರ ಪತ್ನಿ ಸುದೇಶ ಧನಕರ್ ಅವರು ಅವರ ತಾಯಿ ಭಗವತಿದೇವಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಮ್ಮ ತಾಯಿ ಸುಮನಬಾಯಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.