ಬಿಜೆಪಿ ಶಿಸ್ತು ಸಮಿತಿ ಸೂಚನೆ ಬೆನ್ನಲ್ಲೇ ವಕ್ಫ್‌ ಸಂಬಂಧ ಯತ್ನಾಳ್‌ 2ನೇ ಹಂತದ ವಕ್ಫ್‌ ಹೋರಾಟ

| Published : Dec 06 2024, 04:39 AM IST

Basangowda patil yatnal

ಸಾರಾಂಶ

ಶೋಕಾಸ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕಾರ್ಯದರ್ಶಿ ಓಂ ಪಾಠಕ್‌ ಮುಂದೆ ಹಾಜರಾಗಿ ಮಾಹಿತಿ ನೀಡಿದ ಬೆನ್ನಲ್ಲೇ 2ನೇ ಹಂತದ ವಕ್ಫ್‌ ಹೋರಾಟ ನಡೆಸಲು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮುಂದಾಗಿದ್ದಾರೆ.

ನವದೆಹಲಿ : ಶೋಕಾಸ್‌ ನೋಟಿಸ್‌ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕಾರ್ಯದರ್ಶಿ ಓಂ ಪಾಠಕ್‌ ಮುಂದೆ ಹಾಜರಾಗಿ ಮಾಹಿತಿ ನೀಡಿದ ಬೆನ್ನಲ್ಲೇ 2ನೇ ಹಂತದ ವಕ್ಫ್‌ ಹೋರಾಟ ನಡೆಸಲು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮುಂದಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿತ್ತು. ಈ ಹಿನ್ನೆಲೆಯಲ್ಲಿ ಪಾಠಕ್‌ ಮುಂದೆ ಅವರು ಹಾಜರಾಗಿದ್ದರು. ಆ ವೇಳೆ ಪಕ್ಷದ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಬೇಡಿ. ಆದರೆ, ವಕ್ಫ್‌ ಹೋರಾಟ ಮುಂದುವರಿಸಿ ಎಂದು ಅವರು ಸೂಚಿಸಿದ್ದರು. ಜೊತೆಗೆ, ಅವರ ಹೋರಾಟವನ್ನು ಶ್ಲಾಘಿಸಿದ್ದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಶಿಸ್ತು ಸಮಿತಿ ಮುಂದೆ ಹಾಜರಾಗಿ ಬಂದಿದ್ದೇನೆ. ನಮ್ಮ ದಾಖಲೆ ನೋಡಿ ಅಧಿಕಾರಿಗಳು ಖುಷಿಯಾಗಿದ್ದಾರೆ. ಅತ್ಯುತ್ತಮವಾಗಿ ದಾಖಲೆ ಸಂಗ್ರಹ ಮಾಡಿದ್ದೀರಿ ಎಂದು ಹೇಳಿದ್ದಾರೆ. ನಾವು ವಕ್ಫ್ ವಿರುದ್ಧದ ಹೋರಾಟದ ಸಲುವಾಗಿ ಸಭೆ ಸೇರಿದ್ದೆವು. ಮೊದಲ ಹಂತದಲ್ಲಿ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಬಹುತೇಕ ಭಾಗಗಳಿಗೆ ಭೇಟಿ ನೀಡಿದ್ದೇವೆ. ವಕ್ಫ್‌ ಆಸ್ತಿ ಕಬಳಿಕೆ ವಿರುದ್ಧ ಹೋರಾಟ ನಡೆಸಿದ್ದೇವೆ.

ಇನ್ನು ದಾವಣಗೆರೆ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಬೇರೆ, ಬೇರೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇವೆ. ಎರಡನೇ ಹಂತದ ಹೋರಾಟ ಪೂರ್ಣಗೊಂಡ ಬಳಿಕ ರೈತರು ಹಾಗೂ ಮಠಾಧೀಶರನ್ನು ಒಳಗೊಂಡ ನಿಯೋಗದ ಮೂಲಕ ಸಮಿತಿಗೆ ದಾಖಲೆಗಳನ್ನು ಹಸ್ತಾಂತರಿಸಲಾಗುವುದು ಎಂದರು.