ಸಾರಾಂಶ
ವಸತಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ನಟಿಸಿರುವ ‘ಕಲ್ಟ್’ ಚಲನಚಿತ್ರದ ಚಿತ್ರೀಕರಣದ ವೇಳೆ ಡ್ರೋನ್ ಕ್ಯಾಮೆರಾಗೆ ಹಾನಿಯಾಗಿದ್ದರಿಂದ ಆರ್ಥಿಕ ನಷ್ಟವಾಗಿದೆ ಎಂದು ಬೇಸರಗೊಂಡು ಛಾಯಾಗ್ರಾಹಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು : ವಸತಿ ಸಚಿವ ಜಮೀರ್ ಅಹಮದ್ ಖಾನ್ ಪುತ್ರ ನಟಿಸಿರುವ ‘ಕಲ್ಟ್’ ಚಲನಚಿತ್ರದ ಚಿತ್ರೀಕರಣದ ವೇಳೆ ಡ್ರೋನ್ ಕ್ಯಾಮೆರಾಗೆ ಹಾನಿಯಾಗಿದ್ದರಿಂದ ಆರ್ಥಿಕ ನಷ್ಟವಾಗಿದೆ ಎಂದು ಬೇಸರಗೊಂಡು ಛಾಯಾಗ್ರಾಹಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ.22ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿ ನಿವಾಸಿ ಸಂತೋಷ್ ಎಂಬಾತನನ್ನು ಆತನ ಕುಟುಂಬದವರು ರಕ್ಷಿಸಿದ್ದಾರೆ.
ನನ್ನ ಆತ್ಮಹತ್ಯೆ ನಿರ್ಧಾರಕ್ಕೆ ಸಚಿವರ ಪುತ್ರ ನಟ ಝೈದ್ ಖಾನ್, ಕಲ್ಟ್ ಸಿನಿಮಾದ ನಿರ್ದೇಶಕ ಅನಿಲ್, ಜಗದೀಶ್ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ಅನಿಲ್ ಕಾರಣರಾಗಿದ್ದಾರೆ ಎಂದು ಸಂತೋಷ್ ಆರೋಪ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಲ್ಟ್ ಸಿನಿಮಾ ಚಿತ್ರೀಕರಣವು ನಡೆದಿತ್ತು. ಆ ಚಿತ್ರೀಕರಣಕ್ಕೆ ಸಂತೋಷ್ ಅವರ 25 ಲಕ್ಷ ರು. ಮೌಲ್ಯದ ಡ್ರೋನ್ ಕ್ಯಾಮೆರಾವನ್ನು ದಿನಕ್ಕೆ 25 ಸಾವಿರ ರು. ನಂತೆ ಬಾಡಿಗೆಗೆ ಸಿನಿಮಾದವರು ಪಡೆದಿದ್ದರು. ಆದರೆ ನ.21 ರಂದು ಚಿತ್ರೀಕರಣದ ವೇಳೆ ಕ್ಯಾಮೆರಾಗೆ ಹಾನಿಯಾಗಿದೆ. ಈ ರಿಪೇರಿ ವೆಚ್ಚ ಭರಿಸುವಂತೆ ನಟ ಝೈದ್, ನಿರ್ದೇಶಕ ಅನಿಲ್ ಹಾಗೂ ವ್ಯವಸ್ಥಾಪಕರಿಗೆ ಸಂತೋಷ್ ಕೇಳಿದ್ದರು.
ಆದರೆ ಕೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲವೆಂದು ಆತನಿಗೆ ಸಿನಿಮಾದವರು ಬೈದು ಕಳುಹಿಸಿದ್ದರು. ಇದರಿಂದ ಬೇಸರಗೊಂಡು ಮನೆಗೆ ಮರಳಿದ ಸಂತೋಷ್, ಮರು ದಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಆಸ್ಪತ್ರೆಯವರ ಮೆಡಿಕಲ್ ಮೆಮೋ ಆಧರಿಸಿ ಸಂತ್ರಸ್ತನ ಹೇಳಿಕೆ ಪಡೆಯಲಾಗಿದೆ. ಈ ಹಣಕಾಸು ವಿಚಾರವಾಗಿ ಸಂತೋಷ್ ಲಿಖಿತ ದೂರು ನೀಡಿಲ್ಲ. ಹಾಗಾಗಿ ಯಾರ ಮೇಲೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.