ಸಾರಾಂಶ
ಕೊಳ್ಳೇಗಾಲದ ಸಾಧಕ ಡಾ.ಗಿರೀಶ್ ಅವರಿಗೆ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಯನ್ನು ಸಚಿವ ಚೆಲುವರಾಯಸ್ವಾಮಿ ನೀಡಿ ಗೌರವಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
2024ನೇ ಸಾಲಿನಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಕೊಡಮಾಡುವ "ದಿ ಪ್ರೈಡ್ ಆಪ್ ಕರ್ನಾಟಕ " ಪ್ರಶಸ್ತಿಗೆ ಕೊಳ್ಳೇಗಾಲದ ಮೂವರು ಸಾಧಕರು ಭಾಜನರಾಗಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್ ಇನ್ನಿತರ ಗಣ್ಯರು ಕರ್ನಾಟಕ ರಾಜ್ಯ ದವಡೆ ಹಾಗೂ ಮುಖ ಶಸ್ತ್ರ ಚಿಕಿತ್ಸಾ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಜಯ್ ಗಾಂಧಿ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಗಿರೀಶ್ ಗೌಡ, ಎಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಬೆಂಗಳೂರಿನ ಡಿ.ಸಿ.ಆರ್.ಇ ಡಿವೈಎಸ್ಪಿ ಮಹಾನಂದ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಗಿರೀಶ್ ಗೌಡ ಪ್ರೆಸ್ ಕ್ಲಬ್‌ನವರು ನನ್ನನ್ನು ಗುರುತಿಸಿ ನನಗೆ ಪ್ರಶಸ್ತಿ ನೀಡಿರುವುದು ಸಂತಸದ ಜೊತೆ ಹೆಚ್ಚಿನ ಜವಾಬ್ದಾರಿ ನೀಡಿದಂತಾಗಿದೆ. ಸಂಜಯ್ ಗಾಂಧಿ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರೇ ಆಗಮಿಸುತ್ತಿರುವುದರಿಂದ ಬಡ ರೋಗಿಗಳ ಸೇವೆ ಮಾಡಲು ಮತ್ತಷ್ಟು ಉತ್ತೇಜನ ದೊರೆತಿದೆ ಎಂದರು.
ಡಿವೈಎಸ್ಪಿ ಮಹಾನಂದ ಅವರು ಮಾತನಾಡಿ, ಇಲಾಖೆಯಲ್ಲಿ ನನ್ನ ಸೇವೆ ಗುರುತಿಸಿ ಹಾಗೂ ನಮ್ಮ ಟ್ರಸ್ಟ್ ಸೇವೆ ಗುರುತಿಸಿ ನಮ್ಮ ತಾಯಿಯವರಿಗೆ ಪ್ರೆಸ್ ಕ್ಲಬ್ ಒಟ್ಟಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ನನ್ನ ಜವಾಬ್ದಾರಿ ದುಪ್ಪಟ್ಟು ಮಾಡಿದ್ದು ಇದರಿಂದ ಜನ ಸೇವೆಗೆ ಹೆಚ್ಚು ಆದ್ಯತೆ ದೊರೆತಂತಾಗಿದ್ದು ಸ್ಪಂದನಾ ಮನೋಭಾವದಡಿ , ಜವಾಬ್ದಾರಿ ಅರಿತು ಕೆಲಸ ಮಾಡಲು ಸಹಕಾರಿಯಾಗಿದೆ ಎಂದರು.