ಬೆಂಗ್ಳೂರು ಗ್ರಾಮಾಂತರ ಪ್ರದೇಶ ಗ್ರೇಟರ್‌ ಬೆಂಗಳೂರಿಗಿಲ್ಲ : ಡಿಸಿಎಂ ಡಿಕೆ ಶಿವಕುಮಾರ್

| Published : Jul 24 2024, 01:22 AM IST / Updated: Jul 24 2024, 10:14 AM IST

ಸಾರಾಂಶ

ಉದ್ದೇಶಿತ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾವುದೇ ಪ್ರದೇಶವನ್ನು ಸೇರಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

 ವಿಧಾನಸಭೆ : ಉದ್ದೇಶಿತ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾವುದೇ ಪ್ರದೇಶವನ್ನು ಸೇರಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಧೀರಜ್ ಮುನಿರಾಜು ಪ್ರಶ್ನೆಗೆ ಉತ್ತರಿಸಿದ ಅವರು, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಮಾಗಡಿ, ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಮೇಲೆ ಒತ್ತಡ ತಗ್ಗಿಸಲು ಉಪನಗರಗಳ ಅಭಿವೃದ್ಧಿ ಮಾಡಲಾಗುವುದು. ಈ ವಿಚಾರ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ಇದೇ ತಿಂಗಳು 26ರಂದು ಆರ್ಥಿಕ ಇಲಾಖೆ ತಾತ್ವಿಕ ಅನುಮೋದನೆ ನೀಡಿದೆ. ಯೋಜನೆಯ ಬಗ್ಗೆ ಸಾಂಖ್ಯಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಹೊರವಲಯದಲ್ಲಿನ 110 ಹಳ್ಳಿಗಳನ್ನು ಈಗಾಗಲೇ ಸೇರಿಸಲಾಗಿದೆ. ಸದ್ಯಕ್ಕೆ ಹೊರ ವಲಯದ ಯಾವುದೇ ನಗರಗಳನ್ನು ಹೊಸ ಸೇರ್ಪಡೆ ಮಾಡುವುದಿಲ್ಲ ಎಂದರು.

ಈ ವೇಳೆ ಧೀರಜ್‌ ಮುನಿರಾಜು, ದೊಡ್ಡಬಳ್ಳಾಪುರ ಕೈಗಾರಿಕಾ ವಲಯವು ವೇಗವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು ಎಂದು ಮನವಿ ಮಾಡಿದರು.