ಬೆಣ್ಣೆಹಳ್ಳ ಪುನಶ್ಚೇತನ, ಒತ್ತುವರಿ ತೆರವು ನೀಲನಕ್ಷೆ ಸ್ವಾಗತಾರ್ಹ

| Published : Dec 01 2024, 01:31 AM IST

ಬೆಣ್ಣೆಹಳ್ಳ ಪುನಶ್ಚೇತನ, ಒತ್ತುವರಿ ತೆರವು ನೀಲನಕ್ಷೆ ಸ್ವಾಗತಾರ್ಹ
Share this Article
  • FB
  • TW
  • Linkdin
  • Email

ಸಾರಾಂಶ

ಮಲಪ್ರಭಾ ಮೇಲ್ಭಾಗದ ಅನೇಕ ಹಳ್ಳಿ, ಕೃಷಿ ಭೂಮಿಗೆ ಬಾರಿ ತೊಂದರೆ

ನರಗುಂದ: ಬೆಣ್ಣೆಹಳ್ಳದ ಪ್ರವಾಹದಿಂದ ಜನತೆಗೆ ಪದೇ ಪದೇ ತೊಂದರೆಯಾಗುತ್ತಿದ್ದು, ಇದನ್ನು ತಪ್ಪಿಸಲು 148 ಕಿಮೀ ಉದ್ದದ ಬೆಣ್ಣೆಹಳ್ಳದ ಪುನಶ್ಚೇತನ ಹಾಗೂ ಒತ್ತುವರಿ ತೆರವಿಗೆ ನೀಲನಕ್ಷೆ ಸಿದ್ದಪಡಿಸಿರುವ ಇಲಾಖೆಯ ಕಾರ್ಯ ವೈಖರಿಯನ್ನು ಸ್ವಾಗತಿಸುತ್ತೇನೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ಅವರು ಶನಿವಾರ ಪಿಡಬ್ಲೂಡಿ ಇಲಾಖೆಯ ಸರ್ಕ್ಯೂಟ್ ಹೌಸನಲ್ಲಿ ನೀರಾವರಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿ, ಶಿಗ್ಗಾಂವಿ-ಸವಣೂರ ಮತಕ್ಷೇತ್ರದಿಂದ ಬರುವ ಬೆಣ್ಣೆಹಳ್ಳವು ನರಗುಂದ ಮತಕ್ಷೇತ್ರದ ರೋಣ ತಾಲೂಕಿನ ಮೆಣಸಗಿ ಗ್ರಾಮದ ಮಲಪ್ರಭಾ ನದಿಗೆ ಬಂದು ಸೇರುತ್ತದೆ. ಈ 148 ಕಿಮೀ ಉದ್ದದ ಬೆಣ್ಣೆಹಳ್ಳದ ಪುನಶ್ಚೇತನ ಕಾರ್ಯದ ನೀಲನಕ್ಷೆ ನೀರಾವರಿ ಇಲಾಖೆಯಿಂದ ಸಿದ್ಧಪಡಿಸಲಾಗುತ್ತಿದೆ. ನೀಲನಕ್ಷೆ ಸಿದ್ದಪಡಿಸುವಾಗ ಬೆಣ್ಣೆಹಳ್ಳದ ಪ್ರವಾಹದಲ್ಲಿ ತೊಂದರೆ ಎದುರಿಸುವ ಪ್ರದೇಶಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಹೇಳಿದರು.

ಮೆಣಸಗಿ ಗ್ರಾಮದ ಹತ್ತಿರ ಸೇರುವ ಬೆಣ್ಣೆಹಳ್ಳದ ನೀರು ಮಲಪ್ರಭಾ ನದಿ ಹರಿಯುವ ನೀರನ್ನು ತಡೆದು ನಿಲ್ಲಿಸುತ್ತದೆ. ಇದರಿಂದ ಮಲಪ್ರಭಾ ಮೇಲ್ಭಾಗದ ಅನೇಕ ಹಳ್ಳಿ, ಕೃಷಿ ಭೂಮಿಗೆ ಬಾರಿ ತೊಂದರೆಯಾಗುತ್ತಿದೆ. ಈ ಭಾಗದ ಜನರಿಗೆ ಮಳೆ ಬಂದರೂ ತೊಂದರೆ, ಬರದೇ ಇದ್ದರೂ ತೊಂದರೆಯಾಗುತ್ತಿದೆ. ತೊಂದರೆ ನಿವಾರಣೆಗೆ ಬೆಣ್ಣೆಹಳ್ಳ ಪುನಶ್ಚೇತನದ ನೀಲನಕ್ಷೆಯ ₹1610 ಕೋಟಿ ವೆಚ್ಚದ ಡಿಪಿಆರ್ ಸಿದ್ಧ ಪಡಿಸಲಾಗಿದೆ. ಕಾಮಗಾರಿಯ ಅನುದಾನವು ಯಾವುದೇ ಕಾರಣಕ್ಕೂ ಅನವಶ್ಯಕ ಕೆಲಸಕ್ಕೆ ಪೋಲಾಗದೇ ಸರಿಯಾದ ರೀತಿಯಲ್ಲಿ ಸದುಪಯೋಗಯಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಪ್ರೌಢವಿಭಾಗ, ಪದವಿಪೂರ್ವ ಕಾಲೇಜು, ಪ್ರಥಮ ದರ್ಜೆ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅವಶ್ಯಕತೆ ಇದೆ. ಈಗಾಗಲೇ ಎರಡು ಹಾಸ್ಟೆಲ್ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಾಸ್ಟೆಲ್ ನಲ್ಲಿ ಸ್ಥಳಾವಕಾಶಕ್ಕಾಗಿ ದೂರದೂರಿನ ವಿದ್ಯಾರ್ಥಿಗಳ ಬೇಡಿಕೆ ಹೆಚ್ಚಾಗಿದೆ. ದೂರದೂರಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಅಧಿಕಾರಿಗಳು ಮಾಡಿಕೊಡಬೇಕು. ಮುಖ್ಯಮಂತ್ರಿಗಳಿಗೆ ವಸತಿ ನಿಲಯಗಳ ನಿರ್ಮಾಣಕ್ಕೆ ಅನುದಾನದ ಬೇಡಿಕೆಗೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಎಂ.ಬಿ. ಚಿನಗುಡಿ, ನೀರಾವರಿ ಇಲಾಖೆಯ ಸೂಪರಿಡೆಂಟ್ ಎಂಜಿನೀಯರ್‌ ಶ್ರೀನಿವಾಸ ಮಲ್ಲಿಗವಾಡ, ಎಇಇ ಜಗದೀಶ ಕುರಿ, ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ‌ದೊಡಮನಿ, ಎಂ.ಎಸ್. ಓಲೇಕಾರ, ಎಂ.ಎ. ಗೋಕಾಕ, ಉಮೇಶಗೌಡ ಪಾಟೀಲ ಇತರರಿದ್ದರು.

30ಜಿಡಿಜಿ9

ಶಾಸಕ ಸಿ.ಸಿ.ಪಾಟೀಲರು ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿದರು.