ಬೆಣ್ಣಿಹಳ್ಳಕ್ಕೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿ ಪ್ರವಾಹ ತಡೆಯುವ ಕಾಮಗಾರಿಗೆ ₹ 200 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಾರದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಹುಬ್ಬಳ್ಳಿ:

ಕ್ಷೇತ್ರದಲ್ಲಿ ಸಮರ್ಪಕ ಹಾಗೂ ಗುಣಮಟ್ಟದ ಕೆಲಸಗಳಾಗಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಕೆಲಸ ಮಾಡದ ಅಧಿಕಾರಿ ವರ್ಗವನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಶಾಸಕರಾದ ಎನ್‌.ಎಚ್‌. ಕೋನರಡ್ಡಿ, ಎಂ.ಆರ್‌. ಪಾಟೀಲ ಖಡಕ್‌ ವಾರ್ನಿಂಗ್‌ ಮಾಡಿದರು. ಇದೇ ವೇಳೆ ಉತ್ತರ ಕರ್ನಾಟಕದ ಬಹುದಿನ ಬೇಡಿಕೆ ಬೆಣ್ಣೆಹಳ್ಳ ಪ್ರವಾಹ ಶಾಶ್ವತ ತಡೆ ಯೋಜನೆಯ ಕಾಮಗಾರಿಗೆ ಒಂದು ವಾರದಲ್ಲೇ ಚಾಲನೆ ನೀಡಲಾಗುವುದು ಎಂದು ಕೋನರಡ್ಡಿ ಹೇಳಿದರು.

ತಾಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಈ ವಿಷಯವನ್ನು ಶಾಸಕರು ತಿಳಿಸಿದರು.

ಬೆಣ್ಣಿಹಳ್ಳಕ್ಕೆ ಅಲ್ಲಲ್ಲಿ ತಡೆಗೋಡೆ ನಿರ್ಮಿಸಿ ಪ್ರವಾಹ ತಡೆಯುವ ಕಾಮಗಾರಿಗೆ ₹ 200 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್‌ ಪ್ರಕ್ರಿಯೆ ಕೂಡ ಮುಗಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಾರದಲ್ಲಿಯೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ₹ 300 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೂ ಚಾಲನೆ ನೀಡಲಿದ್ದಾರೆ ಎಂದು ಕೋನರಡ್ಡಿ ವಿವರಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 368 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ (ಎಂ.ವಿ.ಎಸ್) ಯೋಜನೆಗೆ ವಿಳಂಬಕ್ಕಾಗಿ ಎಲ್‌ ಆ್ಯಂಡ್‌ ಟಿ ಕಂಪನಿಗೆ ₹ 30 ಕೋಟಿ ದಂಡವಿಧಿಸಿದರೂ ತ್ವರಿತವಾಗಿ ಕಾಮಗಾರಿ ಮಾಡುತ್ತಿಲ್ಲ. ಕೂಡಲೇ ಕಾಮಗಾರಿ ಮಾಡದಿದ್ದರೆ ರಾಜ್ಯಮಟ್ಟದಲ್ಲಿ ಸಂಬಂಧಿಸಿದ ಸಚಿವರ ಜತೆ ಸಭೆ ಮಾಡಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಎಸ್ಸೆಸ್ಸೆಲ್ಸಿ ಫಲಿತಾಂಶ, ಆರೋಗ್ಯ, ಕೃಷಿ, ತೋಟಗಾರಿಕೆ, ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಬಿವೃದ್ಧಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಕುಂದು-ಕೊರತೆ ಪರಿಹರಿಸಲು ಸ್ಪಂದಿಸಬೇಕೆಂದು ಶಾಸಕದ್ವಯರು ತಾಕೀತು ಮಾಡಿದರು.

ರಾಜ್ಯ, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರೆ ರಸ್ತೆಗಳ ಪಕ್ಕದಲ್ಲಿ ರೈತರಿಗೆ ಉಪಯುಕ್ತವಾಗುವಂತ ಸಸಿ ನೆಡುವಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು. ಸಭೆಗೂ ಮುನ್ನ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮೌನಾಚರಣೆ ಮಾಡುವ ಮೂಲಕ ಸಂತಾಪ ಸಲ್ಲಿಸಲಾಯಿತು.

ಸಭೆಯಲ್ಲಿ ತಹಸೀಲ್ದಾರ್‌ ಜೆ.ಬಿ. ಮಜ್ಜಗಿ, ತಾಪಂ ಇಒ ರಾಮಚಂದ್ರ ಹೊಸಮನಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವಾನಂದ ಭೂಮಣ್ಣವರ, ಕೆಡಿಪಿ ನಾಮನಿರ್ದೇಶನ ಸದಸ್ಯರಾದ ಬಸವರಾಜ ಬೀರಣ್ಣವರ, ಮುಸ್ತಾಕ ಹುಯಿಲಗೋಳ, ಸಿದ್ಧರಾಮಜ್ಜ ಹಿರೇಮಠ, ಅಶೋಕ ಸಂಕರಡ್ಡಿ, ಮರಿಯಪ್ಪ ಮಾದರ ಇದ್ದರು.