ಕುರಿ ಕಾಯುತ್ತಿದ್ದ ಮಕ್ಕಳನ್ನು ಶಾಲೆಗೆ ಕರೆ ತಂದ ಬಿಇಒ

| Published : Jun 07 2024, 12:31 AM IST

ಕುರಿ ಕಾಯುತ್ತಿದ್ದ ಮಕ್ಕಳನ್ನು ಶಾಲೆಗೆ ಕರೆ ತಂದ ಬಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆ ಕಲಿಯುವುದು ಬಿಟ್ಟು ಕುರಿ ಕಾಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕುಷ್ಟಗಿ ಬಿಇಒ ಸುರೇಂದ್ರ ಕಾಂಬಳೆ ಮಕ್ಕಳ ಹಾಗೂ ಪಾಲಕರ ಮನವೊಲಿಸಿ ಮರಳಿ ಶಾಲೆಗೆ ಸೇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಶಾಲೆ ಕಲಿಯುವುದು ಬಿಟ್ಟು ಕುರಿ ಕಾಯುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಕುಷ್ಟಗಿ ಬಿಇಒ ಸುರೇಂದ್ರ ಕಾಂಬಳೆ ಮಕ್ಕಳ ಹಾಗೂ ಪಾಲಕರ ಮನವೊಲಿಸಿ ಮರಳಿ ಶಾಲೆಗೆ ಸೇರಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬಿಇಒ ಸುರೇಂದ್ರ ಕಾಂಬಳೆ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ಇಬ್ಬರು ಮಕ್ಕಳು ಕುರಿ ಕಾಯುತ್ತಿರುವುದನ್ನು ಗಮನಿಸಿ ತಮ್ಮ ವಾಹನದಿಂದ ಕೆಳಗಿಳಿದು ಆ ವಿದ್ಯಾರ್ಥಿಗಳನ್ನು ವಿಚಾರಿಸಿದ್ದಾರೆ.

ಅದರಲ್ಲಿ ಓರ್ವ ತಾಲೂಕಿನ ವಿರುಪಾಪುರ ಗ್ರಾಮದ ನಾಲ್ಕನೇ ತರಗತಿಯ ಸತೀಶ ಹಾಗೂ ಲಿಂಗದಳ್ಳಿಯ ಏಳನೇ ತರಗತಿಯ ನಿರುಪಾದಿ ಎಂದು ತಿಳಿದು ಬಂತು. ಸ್ವತಃ ತಾವೇ ಪಾಲಕರ ಹತ್ತಿರ ಹೋಗಿ ಅವರ ಮನವೊಲಿಸಿ ಮಕ್ಕಳ ಶಿಕ್ಷಣದ ಬಗ್ಗೆ ತಿಳುವಳಿಕೆ ನೀಡಿ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಅವರನ್ನು ಮರಳಿ ಶಾಲೆಗೆ ಸೇರಿಸಿ, ಪಠ್ಯಪುಸ್ತಕ ನೀಡಿ ಮಕ್ಕಳ ಜೊತೆ ಬಿಸಿಊಟ ಸೇವಿಸುವ ಮೂಲಕ ಶಿಕ್ಷಣ ಪ್ರೇಮ ಮೆರೆದಿದ್ದಾರೆ. ಜೊತೆಗೆ ಮಕ್ಕಳ ಶಿಕ್ಷಣದ ಬಗ್ಗೆ ವಿಶೇಷ ಕಾಳಜಿ ವಹಿಸಿ, ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವಂತೆ ಕ್ರಮವಹಿಸುತ್ತಿದ್ದಾರೆ.

ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಆದ ಕಾರಣ ಶಿಕ್ಷಣ ಇಲಾಖೆಯವರ ಜೊತೆಗೆ ಸಾರ್ವಜನಿಕರು ಸಹಿತ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಬಿಇಒ ಸುರೇಂದ್ರ ಕಾಂಬಳೆ.

ವಿದ್ಯುತ್ ಟಿಸಿ ಸ್ಥಳಾಂತರಿಸಲು ಒತ್ತಾಯ:

ಹನುಮಸಾಗರ ಸಮೀಪದ ಗಡಚಿಂತಿ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡಿಗೆ ಹತ್ತಿರ ಅಪಾಯದಲ್ಲಿರುವ ವಿದ್ಯುತ್ ಟಿಸಿಯನ್ನು ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಹಲವಾರು ವರ್ಷಗಳಿಂದ ಶಾಲೆಯ ಕಾಂಪೌಂಡ್‌ ಪಕ್ಕ ಟಿಸಿ ಅಳವಡಿಸಲಾಗಿದೆ. ಇದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲ ಪ್ರಾರಂಭವಾಗಿದ್ದರಿಂದ ಈಗಾಗಲೇ ವಿದ್ಯುತ್ ಕಂಬ ಹಾಗೂ ಟಿಸಿ ಬೀಳುವ ಹಂತದಲ್ಲಿದೆ. ಈ ಕುರಿತು ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಾಂತರಿಸಬೇಕೆಂದು ಎಸ್‌ಡಿಎಂಸಿ ಅಧ್ಯಕ್ಷೆ ಪ್ರೇಮಾ ಗೊರೆಬಾಳ ಹಾಗೂ ಗ್ರಾಮಸ್ಥರಾದ ಹನುಮಪ್ಪ ದಂಡಿನ, ವೆಂಕಟೇಶ ಕಬ್ಬರಗಿ, ವಸಂತ ಬೀಳಗಿ, ರೇಣುಕಾ ಹಿರೇಮಠ, ಬಸವರಾಜ ದಿಂಡೂರು, ನಾಗಪ್ಪ ಹರಿಜನ, ಲಂಕೇಶ ಗುಡದೂರು ಆಗ್ರಹಿಸಿದ್ದಾರೆ.