ಸಾರಾಂಶ
ಕರ್ತವ್ಯ ಲೋಪದ ಆರೋಪದಡಿ ಅಮಾನತು ಆಗಿರುವ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಸೇರಿ ೮ ಜನರ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ ಹಾಕಿರುವ ಹಿನ್ನೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಕೊರಟಗೆರೆ ಬಿಇಓ ಸಿ.ವಿ.ನಟರಾಜು ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಕರ್ತವ್ಯ ಲೋಪದ ಆರೋಪದಡಿ ಅಮಾನತು ಆಗಿರುವ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಸೇರಿ ೮ ಜನರ ಮೇಲೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಮತ್ತು ಬೆದರಿಕೆ ಹಾಕಿರುವ ಹಿನ್ನೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಕೊರಟಗೆರೆ ಬಿಇಓ ಸಿ.ವಿ.ನಟರಾಜು ತಿಳಿಸಿದರು. ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.ಕರ್ತವ್ಯಲೋಪ, ಅನಧಿಕೃತ ಗೈರು ಮತ್ತು ನಿರ್ವಹಣೆ ವಿಫಲದ ಕಾರಣದಿಂದ ಕೆರೆಯಾಗಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯಶಿಕ್ಷಕ ಎಸ್.ದೇವರಾಜಯ್ಯನ ಅಮಾನತು ಮಾಡಲಾಗಿದೆ. ಅಮಾನತು ಆದೇಶದಲ್ಲಿ ಲೋಪ ದೋಷ ಇದ್ದರೆ ಡಿಡಿಪಿಐ ಅಥವಾ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗೆ ಮನವಿ ಸಲ್ಲಿಸಲು ಅವಕಾಶವಿದೆ ಎಂದರು.ಶಿಕ್ಷಣ ಇಲಾಖೆಯ ಡಿಡಿಪಿಐಗೆ ಮನವಿ ಸಲ್ಲಿಸಿದ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಶಿಕ್ಷಣ ಇಲಾಖೆ ಕಚೇರಿಗೆ ೮ ಜನ ತಂಡದೊಂದಿಗೆ ನುಗ್ಗಿ ಮನಸ್ಸಿಗೆ ಬಂದಂತೆ ಮಾತನಾಡಿ ಅದೆ ಸ್ಥಳದಲ್ಲಿ ಮತ್ತೆ ನಿಯೋಜನೆ ಮಾಡದಿದ್ದರೆ ಮೇ.೬ರಂದು ನಿನ್ನನ್ನು ವರ್ಗಾವಣೆ ಮಾಡಿಸದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈಗ ಅಮಾನತು ಆಗಿರುವ ದೇವರಾಜಯ್ಯನ ಮೇಲೆ ಪೋಕ್ಸೋ ಪ್ರಕರಣ ಸೇರಿ ೨ಸಲ ಅಮಾನತು ಆಗಿದ್ದಾರೆ ಎಂದರು. ಕೊರಟಗೆರೆ ಕಸಬಾ ವಿಎಸ್‌ಎಸ್‌ಎನ್ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ ಶಿಕ್ಷಣ ಇಲಾಖೆಗೂ ಭೀಮಸೇನಾ ಸಂಘಕ್ಕೂ ಸಂಬಂಧ ಏನು.? ಶಿಕ್ಷಣ ಇಲಾಖೆಯ ದೇವಾಲಯದಲ್ಲಿ ಅಪರಿಚಿತರ ಜೊತೆಗೂಡಿ ದೇವರಾಜಯ್ಯ ಮಾಡಿರುವ ರೀತಿ ಸರಿಯಿಲ್ಲ. ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸುವುದರ ಜೊತೆ ಬೆದರಿಕೆ ಹಾಕಿರುವುದು ಖಂಡನೀಯ. ಕೊರಟಗೆರೆ ಕ್ಷೇತ್ರದಲ್ಲಿ ಇಂತಹ ಶಿಕ್ಷಕನ ಸೇವೆ ಅಗತ್ಯವಿಲ್ಲ ಎಂದು ಹೇಳಿದರು.ಬಾಕ್ಸ್...
ಮುಖ್ಯಶಿಕ್ಷಕ ಅಮಾನತಿಗೆ ಮುಖ್ಯ ಕಾರಣ..ಕೆರೆಯಾಗಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಪ್ರಭಾರ ಮುಖ್ಯಶಿಕ್ಷಕ ಎಸ್.ದೇವರಾಜಯ್ಯ ಏ.೫ರಂದು ಬಿಇಓ ನಟರಾಜು ಶಾಲೆಗೆ ಬೇಟಿ ಕೊಟ್ಟಾಗ ಅನಧಿಕೃತ ಗೈರು, ಶೌಚಾಲಯ ನಿರ್ವಹಣೆ ವಿಫಲ, ನಿರ್ವಹಣೆ ಶೋಚನೀಯ, ಆಹಾರದ ಗುಣಮಟ್ಟ ಕಳಪೆ, ಅನೈರ್ಮಲ್ಯ, ೪೦೫೦೦ರು.ಗಳ ಬಳಕೆ ವಿಫಲದ ಕಾರಣವೊಡ್ಡಿ ಕರ್ತವ್ಯಲೋಪ ಮತ್ತು ನಿರ್ಲಕ್ಷ್ಯತೆಯ ಆರೋಪದಡಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ.ಕೋಟ್ಕರ್ತವ್ಯಲೋಪ ಆರೋಪದಡಿ ವಿಚಾರಣೆ ಬಾಕಿಯಿರಿಸಿ ೮ಜನ ಶಿಕ್ಷಕರ ಅಮಾನತು ಮಾಡಲಾಗಿದೆ. ಅಮಾನತಿಗೆ ಕಾರಣವನ್ನು ಶಿಕ್ಷಣ ಇಲಾಖೆ ಮೇಲಾಧಿಕಾರಿಗೆ ನೀಡಿದ್ದೇನೆ. ಅಮಾನತು ತಡೆಹಿಡಿಯಲು ಶಿಕ್ಷಣ ಇಲಾಖೆ ಮೇಲಾಧಿಕಾರಿಗೆ ಶಿಕ್ಷಕರಿಗೆ ಮನವಿ ಸಲ್ಲಿಸಬೇಕಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮೇಲ್ಲರ ಪ್ರಮುಖ ಕರ್ತವ್ಯ. ಸಿ.ವಿ.ನಟರಾಜು. ಬಿಇಓ. ಕೊರಟಗೆರೆ