ಗಂಟೆ ಭಾರಿಸಿ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸಿದ ಬಿಇಒ

| Published : Jun 01 2024, 12:46 AM IST

ಸಾರಾಂಶ

ಪ್ರತಿ ಮಗುವಿನ ಸೃಜನಶೀಲತೆ ಪೋಷಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡುತ್ತ ಯಶಸ್ವಿಯಾಗಿ‌ ಮುನ್ನಡೆಯಲಿ

ಮುಂಡರಗಿ: ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೆನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಅಭಿಲಾಷೆಯಂತೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಫಡ್ನೇಶಿ ಹಾಗೂ ಬಿಆರ್ ಸಿ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಶಾಲಾ ಗಂಟೆ ಭಾರಿಸಿ ಶುಕ್ರವಾರ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.ಶಾಲಾ ಪ್ರಾರಂಭೋತ್ಸವದ ಮೊದಲ ದಿನವೇ ದಾಖಲಾತಿಯಂತೆ ಶೆ. 98 ಮಕ್ಕಳು ಉತ್ಸಾಹದಿಂದ ಶಾಲೆಗೆ ಹಾಜರಾಗಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಹಾಜರಿದ್ದ ಎಲ್ಲ ಮಕ್ಕಳಿಗೂ ಸರ್ಕಾರದಿಂದ ಕೊಡುವ ಉಚಿತ ಸಮವಸ್ತ್ರ ಹಾಗೂ ಪುಸ್ತಕ ವಿತರಿಸಲಾಯಿತು.

ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪಡ್ನೇಸಿ ಮಾತನಾಡಿ, ಶಿಕ್ಷಕರು ಇಲಾಖೆಯ ಆಶೋತ್ತರಗಳಿಗೆ ಸ್ಪಂದಿಸಿ ಸಮುದಾಯದ ಸಹಭಾಗಿತ್ವದಲ್ಲಿ ಅವರ ವಿಶ್ವಾಸ ಪಡೆದು ಕಾರ್ಯ ನಿರ್ವಹಿಸಿದರೆ ಸರ್ಕಾರಿ ಶಾಲೆಗಳು ಉನ್ನತವಾಗಿ ಬೆಳೆಯುತ್ತವೆ ಎಂಬುದಕ್ಕೆ ಮುಂಡರಗಿ ಪುರಸಭೆ ವ್ಯಾಪ್ತಿಯ ರಾಮೇನಹಳ್ಳಿ ಸರ್ಕಾರಿ ಶಾಲೆ ಮಾದರಿಯಾಗಿದೆ. ನಾನು ರಾಮೇನಹಳಿ ಶಾಲೆಯನ್ನು ಒಂದು ವರ್ಷದಿಂದ ಗಮನಿಸುತ್ತ ಬಂದಿರುವೆ ಎಂದರು.

ಪ್ರತಿ ಹಂತದಲ್ಲಿ ಬದಲಾವಣೆಯತ್ತ ಸಾಗಿದೆ.ಇವರ ಧ್ಯೇಯ ವಾಕ್ಯದಂತೆ ಪ್ರತಿ ಮಗುವಿನ ಸೃಜನಶೀಲತೆ ಪೋಷಿಸಿಕೊಂಡು ಗುಣಾತ್ಮಕ ಶಿಕ್ಷಣ ನೀಡುತ್ತ ಯಶಸ್ವಿಯಾಗಿ‌ ಮುನ್ನಡೆಯಲಿ ಎಂದ ಮಕ್ಕಳಿಗೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮೊದಲ ದಿನ ಹೊಸದಾಗಿ ದಾಖಲಾದ ಹನ್ನೊಂದು ಮಕ್ಕಳಿಗೆ ಉಚಿತ ಪುಸ್ತಕ ಸಮವಸ್ತ್ರದೊಂದಿಗೆ ಹೂ ನೀಡಿ ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಿ.ಆರ್.ಸಿ. ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, ಸರ್ಕಾರಿ ಶಾಲೆಗಳು ನಿರಂತರ ಪ್ರಯೋಗಶೀಲವಾಗಿ ಹೊಸತನದ ತುಡಿತದೊಂದಿಗೆ ಕಾರ್ಯಪ್ರವೃತ್ತರಾದರೆ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯವಾಗುತ್ತದೆ. ರಜಾ ಅವಧಿಯ ಅಕ್ಷರ ದಾಸೋಹದ ಬಿಸಿಯೂಟ ಯೋಜನೆ ಸದುಪಯೋಗ ಪಡಿಸಿಕೊಂಡು ಅಷ್ಟು ದಿನಗಳ ಕಾಲ ಈ ಶಾಲೆಯಲ್ಲಿ ಬೇಸಿಗೆ ರಜಾ ಶಿಬಿರ ಹಮ್ಮಿಕೊಳ್ಳುವ ಮೂಲಕ ಆಸಕ್ತ ಮಕ್ಕಳಿಗೆ ನಿರಂತರ ಕಲಿಕೆಯಲ್ಲಿ ತೊಡಗುವಂತೆ ಮಾಡಿ ಇಂದು ಬಹುಮಾನ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮೊದಲ ದಿನವೇ ಎಲ್ಲ ಮಕ್ಕಳು ಇಷ್ಟು ಉತ್ಸಾಹದಿಂದ ಭಾಗವಹಿಸಿರುವುದಕ್ಕೆ ಎಲ್ಲರನ್ನು ಅಭಿನಂದಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಉಚಿತ ಬೇಸಿಗೆ ರಜಾ ಶಿಬಿರದಲ್ಲಿ ಭಾಗಿಯಾಗಿ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸ್ವಯಂ ಸೇವಾಬಾವದಿಂದ ಮಕ್ಕಳ ರಜಾ ಶಿಬಿರದಲ್ಲಿ‌ ಪಾಲ್ಗೊಂಡ ಸ್ಥಳೀಯ ಪದವೀಧರ ಶಿಕ್ಷಕಿ ಶಿವಲೀಲಾ ಬಸವರಾಜ ಅಬ್ಬಿಗೇರಿ ಇವರನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಡಾ.ನಿಂಗು ಸೊಲಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಸಿ.ಸಂಪನ್ಮೂಲವ್ಯಕ್ತಿ ಹನಮರಡ್ಡಿ ಇಟಗಿ, ಸಿ.ಆರ್.ಪಿ.ಎಸ್.ವೈ.ಹೊಳೆಯಮ್ಮನವರ ಅತಿಥಿಗಳಾಗಿ ಪಾಲ್ಗೊಂಡು ಮಕ್ಕಳಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ದೇವಕ್ಕ ದಂಡಿನ,ಮಕ್ಕಳ ಪಾಲಕರು, ಎಸ್.ಡಿ.ಎಂ.ಸಿ.ಅಧ್ಯಕ್ಷರಾಧಿಯಾಗಿ ಸರ್ವರೂ ಸ್ವಯಂ ಸ್ಪೂರ್ತಿಯಿಂದ ಶಾಲಾ ಪ್ರಾರಂಭೋತ್ಸವದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು. ಹಿರಿಯ ಶಿಕ್ಷಕಿ ಪಿ. ಆರ್. ಗಾಡದ ಸ್ವಾಗತಿಸಿದರು, ಪಿ.ಎಂ.ಲಾಂಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಬಿ. ಹಲವಾಗಲಿ ನಿರೂಪಿಸಿದರು.ಎಂ.ಆರ್.ಗುಗ್ಗರಿ ವಂದಿಸಿದರು.

ಇದೇ ರೀತಿ ತಾಲೂಕಿನ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ರೀತಿಯಲ್ಲಿ ಶಾಲೆಗೆ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ಮಕ್ಕಳನ್ನು ಎತ್ತಿನ ಚಕ್ಕಡಿಯಲ್ಲಿ ಮೆರವಣಿಗೆ ಮಾಡುತ್ತಾ ಶಾಲೆಗೆ ಕರೆತರಲಾಯಿತು. ತಾಲೂಕಿನಾದ್ಯಂತ ಎಲ್ಲ ಶಾಲೆಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದವು. ಎಲ್ಲ ಶಾಲೆಗಳಲ್ಲಿ ಸಿಹಿ ಊಟ ಮಾಡಿಸಲಾಗಿತ್ತು.