ಹುದ್ದೆ ಇಲ್ಲದೆ ಹೊಸ ತಾಲೂಕಿನಲ್ಲಿ ಬಿಇಒ ಕಚೇರಿ ಆರಂಭ

| Published : Apr 27 2025, 01:50 AM IST

ಸಾರಾಂಶ

ಈಗಾಗಲೇ ಇರುವ ಬಿಇಒ ಕಚೇರಿಗಳಲ್ಲಿನ ಸಿಬ್ಬಂದಿ ನಿಯೋಜಿಸುವಂತೆ ಮತ್ತು ಸ್ಥಳೀಯವಾಗಿಯೇ ಕಟ್ಟಡವೊಂದನ್ನು ನೋಡಿಕೊಳ್ಳಬೇಕು. ಇದಕ್ಕಿಂತ ಮಿಗಿಲಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಾಹನ ಮತ್ತು ಚಾಲಕನ ವೇತನವನ್ನು ಕೆಕೆಆರ್‌ಡಿಬಿಯಲ್ಲಿ ಪಡೆಯಲು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಬೇಕು ಎಂದು ಸಹ ಆದೇಶದಲ್ಲಿ ಹೇಳಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

2017ರಲ್ಲಿ ಕಲ್ಯಾಣ ಕರ್ನಾಟಕದಲ್ಲಿ ರಚಿಸಿದ ತಾಲೂಕಿಗಳಿಗೆ 9 ವರ್ಷದ ಬಳಿಕ ಬಿಇಒ ಕಚೇರಿ ಮಂಜೂರಿ ಮಾಡಿ ಆದೇಶಿಸಲಾಗಿದೆ. ಆದರೆ, ಯಾವುದೇ ಹೊಸ ಹುದ್ದೆ, ಕಚೇರಿ ನೀಡಿದೆ ಇರುವುದು ಅಚ್ಚರಿಗೆ ಕಾರಣವಾಗಿದೆ.

ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ. ಆಕಾಶ, ಹೊರಡಿಸಿರುವ ಆದೇಶವು ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯವಾಗಿ ಈಗಾಗಲೇ ಇರುವ ಬಿಇಒ ಕಚೇರಿಗಳಲ್ಲಿನ ಸಿಬ್ಬಂದಿ ನಿಯೋಜಿಸುವಂತೆ ಮತ್ತು ಸ್ಥಳೀಯವಾಗಿಯೇ ಕಟ್ಟಡವೊಂದನ್ನು ನೋಡಿಕೊಳ್ಳಬೇಕು. ಇದಕ್ಕಿಂತ ಮಿಗಿಲಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಾಹನ ಮತ್ತು ಚಾಲಕನ ವೇತನವನ್ನು ಕೆಕೆಆರ್‌ಡಿಬಿಯಲ್ಲಿ ಪಡೆಯಲು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಬೇಕು ಎಂದು ಸಹ ಆದೇಶದಲ್ಲಿ ಹೇಳಲಾಗಿದೆ.

ಹೊಸ ತಾಲೂಕು ರಚನೆಯಾಗಿ ಈಗಾಗಲೇ 8 ವರ್ಷ ಪೂರ್ಣಗೊಂಡು 9 ವರ್ಷವಾಗಿದೆ. ಆದರೂ ಈ ವರೆಗೂ ಪ್ರತ್ಯೇಕ ಬಿಇಒ ಕಚೇರಿ ಪ್ರಾರಂಭಿಸಿರಲಿಲ್ಲ. ಈ ಹಿಂದೆಯೇ ಇದ್ದ ತಾಲೂಕಿನಲ್ಲಿಯೇ ಇಷ್ಟು ವರ್ಷಗಳ ಮುಂದುವರಿಸಿಕೊಂಡು ಹೋಗಲಾಗಿದೆ. ಈ ಹೊಸ ತಾಲೂಕು ಕೇಂದ್ರಗಳಲ್ಲಿ ಹೊಸ ಬಿಇಒ ಕಚೇರಿ ಪ್ರಾರಂಭಿಸಲು ಆದೇಶವನ್ನೇನೋ ಮಾಡಲಾಗಿದೆ. ಆದರೆ, ಇದಕ್ಕೆ ಅಗತ್ಯ ಹುದ್ದೆಗಳನ್ನು ಸೃಜಿಸಿಲ್ಲ, ಕಚೇರಿ ನಿರ್ಮಿಸಿಲ್ಲ. ಬಾಡಿಗೆ ಕಟ್ಟಡದಲ್ಲಿ ನಡೆಸಲು ಬಾಡಿಗೆ ಮಂಜೂರಾತಿ ನೀಡಿಲ್ಲ. ಹುದ್ದೆ ಇಲ್ಲದ, ಅನುದಾನ ಇಲ್ಲದ ಬಿಇಒ ಕಚೇರಿ ಮಾಡಿರುವುದು ಟೀಕೆಗೆ ಗುರಿಯಾಗಿದೆ. ಇಂಥ ಬಿಇಒ ಕಚೇರಿಯನ್ನು ತೆರೆಯುವ ಅಗತ್ಯವಾದರೂ ಏನಿತ್ತು ಎನ್ನುವುದು ಈಗ ಎದ್ದಿರುವ ಪ್ರಶ್ನೆಯಾಗಿದೆ.

ಗಂಗಾವತಿ ತಾಲೂಕನ್ನು ವಿಂಗಡಿಸಿ ಕನಕಗಿರಿ ಮತ್ತು ಕಾರಟಗಿ ತಾಲೂಕು ರಚಿಸಲಾಗಿದೆ. ಕಾರಟಗಿ ಮತ್ತು ಕನಕಗಿರಿ ಬಿಇಒ ಕಚೇರಿಗೆ ಗಂಗಾವತಿಯಲ್ಲಿ ಇರುವ ಬಿಇಒ ಕಚೇರಿಯಲ್ಲಿನ ಸಿಬ್ಬಂದಿಯಲ್ಲಿಯೇ ಕೆಲವರನ್ನು ನಿಯೋಜಿಸುವಂತೆ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ, ಗಂಗಾವತಿ ಕಚೇರಿಯಲ್ಲಿಯೇ ಹುದ್ದೆ ಖಾಲಿ ಇವೆ. ಇದ್ದ ಸಿಬ್ಬಂದಿಯಲ್ಲಿಯೇ ಕಚೇರಿ ನಿರ್ವಹಣೆ ಕಷ್ಟವಾಗಿದೆ. ಇದರ ನಡುವೆ ಹೊಸ ಕಚೇರಿಗೆ ಸಿಬ್ಬಂದಿ ನಿಯೋಜಿಸಿದರೆ ಹೇಗೆ ಎನ್ನುವುದು ನೌಕರರ ಪ್ರಶ್ನೆಯಾಗಿದೆ.

ಈ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು ಹತ್ತು ದಿನದೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

ಬಿಇಒ ಹುದ್ದೆಗೆ ಡಯಟ್‌ನಲ್ಲಿ ಇರುವವರಲ್ಲಿ ಅರ್ಹ ಓರ್ವರನ್ನು ಬಿಇಒ ಎಂದು ನಿಯೋಜಿಸುವಂತೆ ಸೂಚಿಸಲಾಗಿದೆ. ಇನ್ನು ಕಚೇರಿಯನ್ನು ಸ್ಥಳೀಯವಾಗಿಯೇ ಸುಸಜ್ಜಿತವಾಗಿರುವ ಶಾಲೆ ಅಥವಾ ಕಟ್ಟಡವೊಂದರಲ್ಲಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ.

ಇದಕ್ಕಾಗಿ ತಗಲುವ ನಿರ್ವಹಣೆ ವೆಚ್ಚ ಮತ್ತು ಓಡಾಡಲು ವಾಹನ ಬಾಡಿಗೆ ಪಡೆದು, ಅದರ ನಿರ್ವಹಣೆ , ಗುತ್ತಿಗೆ ಆಧಾರದಲ್ಲಿ ಚಾಲಕನನ್ನು ನೇಮಕ ಮಾಡಿಕೊಳ್ಳಬೇಕು. ಈ ಎಲ್ಲ ವೆಚ್ಚವನ್ನು ಕೆಕೆಆರ್‌ಡಿಬಿಯ ಅನುದಾನದಲ್ಲಿ ನೀಡುವಂತೆ ಸ್ಥಳೀಯ ಶಾಸಕರಲ್ಲಿ ಮನವಿ ಮಾಡಿಕೊಳ್ಳುವಂತೆಯೂ ಸೂಚಿಸಲಾಗಿದೆ. ಸರ್ಕಾರ ಕೂಡಲೇ ಹೊಸ ತಾಲೂಕಿನಲ್ಲಿ ಬಿಇಒ ಕಚೇರಿ ಪ್ರಾರಂಭಿಸಲು ಹೊಸ ಹುದ್ದೆ ಸೃಜಿಸಬೇಕು ಮತ್ತು ಅಗತ್ಯ ಅನುದಾನ ನೀಡಬೇಕು. ಹಳೆಯ ತಾಲೂಕಿನಲ್ಲಿರುವ ಬಿಇಒ ಕಚೇರಿಯ ಸಿಬ್ಬಂದಿಯನ್ನೇ ನಿಯೋಜಿಸಿದರೆ ತೀವ್ರ ಸಮಸ್ಯೆಯಾಗುತ್ತದೆ.

ಶಶಿಲ್ ನಮೋಶಿ ವಿಪ ಸದಸ್ಯಈಗಿರುವ ಬಿಇಒ ಕಚೇರಿಯಲ್ಲಿಯೇ ಕೆಲಸದ ಒತ್ತಡ ಹೆಚ್ಚಿದೆ. ಈಗ ಹೊಸ ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಿಸುವ ಬಿಇಒ ಕಚೇರಿಗೆ ಪ್ರತ್ಯೇಕ ಸಿಬ್ಬಂದಿ ನೀಡಬೇಕು.

ನಾಗರಾಜ ಜುಮ್ಮನ್ನವರ ಜಿಲ್ಲಾಧ್ಯಕ್ಷ ಸರ್ಕಾರಿ ನೌಕರರ ಸಂಘ ಕೊಪ್ಪಳ