ಸಾರಾಂಶ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತವು ಸ್ಥಾಪನೆಯಾದ ಎರಡೇ ವರ್ಷದಲ್ಲಿ ನಿತ್ಯ 580 ಲೀಟರ್ ಹಾಲು ಉತ್ಪಾದನೆ ಮಾಡಿದ್ದಕ್ಕಾಗಿ ಕೆಎಂಎಫ್ 2023-24ನೇ ಸಾಲಿನ ಅತ್ಯುತ್ತಮ ಮಹಿಳಾ ಸಂಘ ಪ್ರಶಸ್ತಿಗೆ ಆಯ್ಕೆಯಾಗಿದೆ.
ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಧಾರವಾಡ ಸೆ.19 ರಂದು ನಡೆಯುವ ತೃತೀಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಕಳೆದ 2022 ಏ. 4 ರಂದು ಗ್ರಾಪಂ ಮಟ್ಟದ ಸಂಜೀವಿನಿ ಯೋಜನೆಯ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಸ್ಥಾಪನೆಯಾದ ಮಹಿಳಾ ಸಂಘವು 13 ನಿರ್ದೆಶಕರನ್ನೊಳಗೊಂಡು ಶಾರದಾ ವಿರುಪಾಕ್ಷಗೌಡ ಪಾಟೀಲ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.ಸಂಘದಲ್ಲಿ ಈವರೆಗೂ 100 ಶೇರುದಾರರಿದ್ದು, ಸ್ಥಾಪನೆಯಾದ ಕೇವಲ ಎರಡು ವರ್ಷದಲ್ಲಿ ಹೆಚ್ಚು ಸಾಧನೆ ಮಾಡಿದ ಸಂಘವಾಗಿದೆ. ಆರಂಭದಲ್ಲಿ ಪ್ರತಿನಿತ್ಯ 40 ಲೀ ಉತ್ಪಾದನೆಯಾಗುತ್ತಿದ್ದ ಹಾಲು ಈಗ ನಿತ್ಯ 60 ರೈತರಿಂದ 580 ಲೀ ಹಾಲು ಸಂಗ್ರಹವಾಗುತ್ತಿದೆ. ಅಂದರೆ ಆರಂಭದಲ್ಲಿ ತಿಂಗಳಿಗೆ 1820 ಲೀ ಸಂಗ್ರಹವಾಗುತ್ತಿದ್ದ ಹಾಲು ಪ್ರಸ್ತುತ ತಿಂಗಳಲ್ಲಿ 15 ಸಾವಿರ ಲೀ ಹಾಲು ಉತ್ಪಾದನೆಯಾಗುತ್ತಿದೆ. ಗದಗ ನರಗುಂದ ವಿಭಾಗದ 20 ಹಾಲು ಉತ್ಪಾದಕರ ಸಂಘದಲ್ಲಿ ಲಕ್ಕುಂಡಿ ಮಹಿಳಾ ಸಹಕಾರ ಸಂಘಕ್ಕೆ ಪ್ರಶಸ್ತಿ ದೊರೆತಿದ್ದಕ್ಕೆ ಸಂಘದ ನಿರ್ದೇಶಕ ಮಂಡಳಿ ಹರ್ಷ ವ್ಯಕ್ತಪಡಿಸುತ್ತಿದೆ.
ರೈತರಿಗೆ ಬಡ್ಡಿ ರಹಿತ ಸಾಲ: ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳದ ಕಹಾಮ ಸಂಜೀವನಿ ಯೋಜನೆಯಡಿಯಲ್ಲಿ ಬಡ್ಡಿ ರಹಿತ ₹2.50 ಲಕ್ಷ ಸಾಲವನ್ನು ಮೊದಲು 10 ರೈತರಿಗೆ ವಿತರಿಸಲಾಯಿತು.ಸಾಲವು ಮರುಪಾವತಿಸದಂತೆ ಒಟ್ಟು 37 ರೈತರಿಗೆ ಬಡ್ಡಿ ರಹಿತ ಸಾಲವನ್ನು ಸಂಘದ ವತಿಯಿಂದ ನೀಡಲಾಗಿದೆ. 50 ರಾಸುಗಳಿಗೆ ಸಂಘದ ಆಶ್ರಯದಲ್ಲಿ ವಿಮಾ ಮಾಡಿಸಲಾಗಿದೆ. ಹಾಲು ಉತ್ಪಾದಕರ 2 ಮಹಿಳಾ ಗುಂಪಿಗೆ ₹ 15 ಸಾವಿರಗಳ ಸುತ್ತು ನಿಧಿ ದೊರೆತಿದೆ. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶೇರುದಾರ ಮಕ್ಕಳಿಗೆ ಕೆ.ಎಂ.ಎಫ್ ನಿಂದ 10 ಸಾವಿರ ಬಹುಮಾನ ನಗದು ಬಹುಮಾನ ದೊರೆತಿದೆ.
ರೈತರಿಗೆ ₹1 ಪ್ರೋತ್ಸಾಹ ಧನಕೆಎಂಎಫ್ನಿಂದ ಹಾಲು ಉತ್ಪಾದಕ ರೈತರಿಗೆ ಲೀಟರ್‌ಗೆ ₹33.35 ಇದ್ದ ದರವನ್ನು ₹32.35 ಇಳಿಕೆ ಮಾಡಿದೆ. ಹೀಗಾಗಿ ಎಲ್ಲ ಸಂಘಗಳು ಉತ್ಪಾದಕರಿಗೆ ₹30-31 ನೀಡುತ್ತಿವೆ. ಆದರೆ ನಮ್ಮ ಸಂಘವು ತನ್ನ ಸ್ಥಳೀಯ ಹಾಲು ಮಾರಾಟ ಮತ್ತು ಪಶು ಆಹಾರ ಮಾರಾಟದಲ್ಲಿ ಬರುವ ಲಾಭದಲ್ಲಿ ಲೀಟರ್‌ಗೆ ₹ 32 ಪ್ರೋತ್ಸಾಹವಾಗಿ ನೀಡಲಾಗುತ್ತಿದ್ದು 35 ಪೈಸೆ ಮಾತ್ರ ಲಾಭ ತೆಗೆದುಕೊಳ್ಳುತ್ತಿದೆ. ಇನ್ನೂ ಸಂಘದ ಉತ್ಸಾಹ ಕಾರ್ಯ ಚಟುವಟಿಕೆ ಗಮನಿಸಿದ ಕೆಎಂಎಫ್ ನಿರ್ದೇಶಕ ಹನುಮಂತ ಹಿರೇಗೌಡರ ಸಂಘದ ವ್ಯವಹಾರಕ್ಕಾಗಿ ಅಧಿಕ ಮೊತ್ತದ ಉಪಕರಣಗಳನ್ನು ನೀಡಿ ಉತ್ತೇಜನ ನೀಡಿದ್ದು ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಕೆಎಂಎಫ್‌ನಿಂದ ಬರುವ ಸಾಲ, ಸೌಲಭ್ಯ ದೊರಕಿಸಿ ಮಹಿಳಾ ಸಂಘಕ್ಕೆ ಪ್ರೋತ್ಸಾಹಿಸಿದಕ್ಕಾಗಿ ಸಂಘದ ಅಧ್ಯಕ್ಷೆ ಶಾರದಾ ಪಾಟೀಲ ಮತ್ತು ಕಾರ್ಯದರ್ಶಿ ಅನ್ನಪೂರ್ಣ ರಿತ್ತಿ ಅಭಿನಂದಿಸಿದ್ದಾರೆ.