ಹಿರೇಸಿಂದೋಗಿ ಸರ್ಕಾರಿ ಆಸ್ಪತ್ರೆಗೆ ಅತ್ಯುತ್ತಮ ರ್‍ಯಾಂಕ್

| Published : Jul 25 2024, 01:15 AM IST

ಸಾರಾಂಶ

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅತ್ಯುತ್ತಮ ಸೇವೆಯ ರ್‍ಯಾಂಕಿಂಗ್‌ ನೀಡಲಾಗಿದೆ.

ರಾಜ್ಯಮಟ್ಟದ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ

ಸೇವೆ ಮತ್ತು ಕಾರ್ಯನಿರ್ವಹಣೆಗೆ ಅತ್ಯಧಿಕ ಅಂಕ

ಹೆರಿಗೆ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳ ಸಂಪನ್ಮೂಲ ಕೇಂದ್ರ (ಎನ್ಎಚ್‌ಎಸ್‌ಆರ್‌ಸಿ) ರಾಜ್ಯದ 26 ಸಮುದಾಯ ಆರೋಗ್ಯ ಕೇಂದ್ರಗಳ ಸೇವೆಯ ಗುಣಮಟ್ಟವನ್ನು ಸಮೀಕ್ಷೆ ನಡೆಸಿದ್ದು, ಅದರಲ್ಲಿ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅತ್ಯುತ್ತಮ ಸೇವೆಯ ರ್‍ಯಾಂಕಿಂಗ್‌ ನೀಡಲಾಗಿದೆ.

2024-25ನೇ ಸಾಲಿನಲ್ಲಿ ನಡೆದ ಸರ್ವೆಯಲ್ಲಿ ರಾಜ್ಯದ 26 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶೇ. 95.12 ರಷ್ಟು ಅಂಕ ನೀಡುವ ಮೂಲಕ ಶಹಬ್ಬಾಸ್ ಹೇಳಲಾಗಿದೆ.

ಏನಿದು ಸರ್ವೆ:

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರ್ಕಾರ ಯೋಜನೆಗಳ ಜಾರಿ, ಹೆರಿಗೆ ವಾರ್ಡ್‌ನಲ್ಲಿ ದೊರೆಯುವ ಸೇವೆ, ನಿತ್ಯದ ಓಪಿಡಿ ಸೇವೆ, ಐಪಿಡಿ ಸೇವೆ ಸೇರಿದಂತೆ ಹತ್ತಾರು ಸೇವೆಗಳನ್ನು ಪರಿಶೀಲನೆ ನಡೆಸಲಾಗುತ್ತದೆ.

ಇದಕ್ಕಾಗಿ ಕೇಂದ್ರದಿಂದ ಪ್ರತ್ಯೇಕ ತಂಡ ಆಗಮಿಸಿ, ಎರಡು-ಮೂರು ದಿನಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಅಷ್ಟೇ ಅಲ್ಲ, ಆಸ್ಪತ್ರೆಗೆ ಬಂದಿರುವ ರೋಗಿಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡಲಾಗುತ್ತದೆ.

ಇದೆಲ್ಲವನ್ನು ಒಳಗೊಂಡ ವರದಿಯನ್ನು ಸಿದ್ಧ ಮಾಡಲಾಗುತ್ತದೆ. ಹೀಗೆ ಸಿದ್ಧ ಮಾಡಲಾದ ವರದಿಯನ್ನಾಧರಿಸಿ ರಾಜ್ಯಮಟ್ಟದಲ್ಲಿ ಈ ರೀತಿಯಾಗಿ ಮೊದಲೇ ಗುರುತಿಸಿದ 26 ಸಮುದಾಯ ಆರೋಗ್ಯ ಕೇಂದ್ರಗಳ ವರದಿಯನ್ನು ಕೇಂದ್ರ ತಂಡ ಸಿದ್ಧ ಮಾಡಿ, ಅಂಕ ನೀಡುತ್ತದೆ.

ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರ ಶೇ. 95.12ರಷ್ಟು ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದೆ.

ನಮ್ಮ ಸಮುದಾಯ ಆರೋಗ್ಯ ಕೇಂದ್ರ ಅತ್ಯುತ್ತಮ ರ್‍ಯಾಂಕಿನಲ್ಲಿ ಬಂದಿರುವುದಕ್ಕೆ ಖುಷಿಯಾಗುತ್ತದೆ. ಅತ್ಯುತ್ತಮ ಸೇವೆ ನೀಡುವ ಪ್ರಯತ್ನಕ್ಕೆ ಮತ್ತಷ್ಟು ಬಲಬದಂತೆ ಆಗಿದೆ ಎನ್ನುತ್ತಾರೆ ಹಿರೇಸಿಂದೋಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ

ಡಾ. ರಮೇಶ ಮೂಲಿಮನಿ.

ಯಾವ ಯಾವ ಆರೋಗ್ಯ ಕೇಂದ್ರಕ್ಕೆ ಎಷ್ಟು ಅಂಕ

ಎಫ್ ಆರ್ ಯು ಸಿಎಚ್ ಸಿ ಹಿರೇಸಿಂದೋಗಿ ಕೊಪ್ಪಳ ಶೇ 95.12

ಎಎಎಮ್ ಯಪಿಎಚ್ ಸಿ ತುಂಗಾನಗರ ಶಿವಮೊಗ್ಗ ಶೇ 94.65

ಸಿಎಚ್ ಸಿ ಕೆರೂರ ಬಾಗಲಕೋಟೆ ಶೇ 92.87

ಎಎಎಮ್ ಪಿಎಚ್ ಸಿ ಮಲ್ಲಿ ಕಲಬುರಗಿ ಶೇ 90.76

ಎಎಎಮ್ ಎಸ್ ಎಚ್ ಸಿ ಬಗಲವಾಡಿ ರಾಯಚೂರು ಶೇ 90.59

ಎಎಎಮ್ ಎಸ್ ಎಚ್ ಸಿ ಚಿಮ್ಕೊಡ ಬೀದರ ಶೇ 89.43

ಎಎಎಮ್ ಪಿಎಚ್ ಸಿ ತೂಬಿನಕೆರೆ ಮಂಡ್ಯ ಶೇ 88.57

ಎಎಎಮ್ ಎಸ್ ಎಚ್ ಸಿ ಗಡಗಿ ಬೀದರ ಶೇ 87.91

ಎಎಎಮ್ ಪಿಎಚ್ ಸಿ ಕೆಆರ್ ಎಸ್ ಮಂಡ್ಯ ಶೇ 81.03

ಎಎಎಮ್ ಪಿಎಚ್ ಸಿ ನಾನವೀನಕೆರೆ ಶೇ 74.61