ಕಡಿಮೆ ದರದಲ್ಲಿ ರೈಲ್ವೆಯಿಂದ ಅತ್ಯುತ್ತಮ ಸೇವೆ

| Published : May 22 2025, 11:47 PM IST

ಸಾರಾಂಶ

ಕೊಪ್ಪಳ ಭಾಗದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಆಗಬೇಕಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೆಮ್ಮ ದೇವಿಯ ಹೆಸರಿಡುವಂತೆ ಸಾರ್ವಜನಿಕರು ಮನವಿ ಮಾಡಿದ್ದು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೊಪ್ಪಳ:

ಬಡವರಿಗೆ ಕಡಿಮೆ ದರದಲ್ಲಿ ಸಾರಿಗೆ ಸೇವೆ ಒದಗಿಸುವ ರೈಲ್ವೆ ಇಲಾಖೆ ಜನಸ್ನೇಹಿಯಾಗಿದೆ. ಇದೀಗ ರೈಲು ನಿಲ್ದಾಣಗಳನ್ನು ಉನ್ನತೀಕರಿಸಿ, ಮೂಲಭೂತ ಸೌಕರ್ಯಗಳನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ಇದರ ಭಾಗವಾಗಿ ಮುನಿರಾಬಾದ್ ರೈಲ್ವೆ ನಿಲ್ದಾಣ ಅಭಿವೃದ್ಧಿಗೊಂಡಿದ್ದು ಹುಲಿಗೆಮ್ಮ ದೇವಿ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಗುರುವಾರ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆಯಡಿ ₹ 18.40 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಮುನಿರಾಬಾದ್‌ ರೈಲು ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಭಾಗದಲ್ಲಿ ಬಹಳಷ್ಟು ರೈಲ್ವೆ ಯೋಜನೆಗಳು ಆಗಬೇಕಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುನಿರಾಬಾದ್ ರೈಲು ನಿಲ್ದಾಣಕ್ಕೆ ಹುಲಿಗೆಮ್ಮ ದೇವಿಯ ಹೆಸರಿಡುವಂತೆ ಸಾರ್ವಜನಿಕರು ಮನವಿ ಮಾಡಿದ್ದು ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅವರ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಹೋದ ಬಳಿಕ ಈ ಕುರಿತು ಕ್ರಮಕೈಗೊಳ್ಳಲಾಗುವುದು. ಇದರೊಂದಿಗೆ ಬಾಣಾಪುರ ನಿಲ್ದಾಣಕ್ಕೆ ಮಹಾತ್ಮ ಗಾಂಧೀಜಿ ಹಾಗೂ ಗಂಗಾವತಿ ನಿಲ್ದಾಣಕ್ಕೆ ಕಿಷ್ಕಿಂದ ಎಂದು ಮರು ನಾಮಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದರು ಹೇಳಿದರು.

ಎರಡು ಮಾರ್ಗಕ್ಕೆ ಮನವಿ:

ಜಿಲ್ಲೆಯ ರೈಲ್ವೆ ಅಭಿವೃದ್ಧಿಯಲ್ಲಿ ಮಾಜಿ ಸಂಸದ ಕರಡಿ ಸಂಗಣ್ಣ ಅವರ ಪರಿಶ್ರಮವೂ ಇದೆ. ಹೊಸ ರೈಲ್ವೆ ಮಾರ್ಗಗಳಾದ ಗಂಗಾವತಿ-ಬಾಗಲಕೋಟೆ ಮಾರ್ಗಕ್ಕೆ ₹ 950 ಕೋಟಿ ಹಾಗೂ ಗಂಗಾವತಿ-ದರೋಜಿ ಮಾರ್ಗಕ್ಕೆ ₹ 402 ಕೋಟಿ ಅನುದಾನ ನೀಡುವಂತೆ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಲಾಗಿದೆ. ಈ ವರ್ಷ ಒಂದು ಮತ್ತು ಮುಂದಿನ ವರ್ಷ ಮತ್ತೊಂದು ಕಾಮಗಾರಿಗೆ ಅನುಮೋದನೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದ ಅವರು, ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರದ ರೈಲ್ವೆ ಲೈನ್ ಬಳಿಯ ಸೇತುವೆಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಲ್ಲಿ ಹೊಸ-ಹೊಸ ರೈಲು ಮಾರ್ಗಗಳಿಂದ ಜನರ ಪ್ರಯಾಣಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಮುನಿರಾಬಾದ್ ರೈಲು ನಿಲ್ದಾಣ ಹೆಚ್ಚು ಜನ ದಟ್ಟಣೆಯಿಂದ ಕೂಡಿರುತ್ತದೆ. ಹುಲಿಗೆಮ್ಮ ದೇವಿಗೆ ಲಕ್ಷಾಂತರ ಭಕ್ತರು ಬಂದು ಹೋಗುವುದರಿಂದ ಈ ನಿಲ್ದಾಣಕ್ಕೆ ಹುಲಿಗೆಮ್ಮ ದೇವಿ ಹೆಸರಿಡಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ:

ನೈಋತ್ಯ ರೈಲ್ವೆ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ, ಚರ್ಚಾ ಹಾಗೂ ಚಿತ್ರಕಲೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಈ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಭೀಮವ್ವ ಶಿಳ್ಳೇಕ್ಯಾತರ, ಹುಲಿಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಗುಂಗಾಡಿ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಮಾಜಿ ಶಾಸಕರಾದ ಬಸವರಾಜ ದಢೇಸೂಗೂರು, ಹುಲಿಗೆಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್. ಪ್ರಕಾಶರಾವ್, ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ವಿಭಾಗೀಯ ವ್ಯವಸ್ಥಾಪಕ ಡಾ. ಅನೂಪ್ ಅಳ್ವಾ ಸೇರಿದಂತೆ ಇತರೆ ಜನಪ್ರತಿನಿಧಿಗಳು ಮತ್ತು ಮುನಿರಾಬಾದ್ ರೈಲ್ವೆ ನಿಲ್ದಾಣದ ಅಧಿಕಾರಿ, ಸಿಬ್ಬಂದಿ ಹಾಗೂ ಹುಲಿಗಿ ಗ್ರಾಮಸ್ಥರು ಉಪಸ್ಥಿತರಿದ್ದರು.