ಸಾರಾಂಶ
- ಶಿವಪಾರ್ವತಿ ಅಂಗಳಲ್ಲಿ ದಿನವಿಡೀ ಜಾತ್ರೆ ವಾತಾವರಣ, ಸೂಕ್ತ ಬಂದೋಬಸ್ತ್
- - - ಕನ್ನಡಪ್ರಭ ವಾರ್ತೆ, ದಾವಣಗೆರೆಎರಡೂವರೆ ದಶಕದಿಂದ ಕೈ ತಪ್ಪಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕೈವಶ ಮಾಡಿಕೊಳ್ಳುವ ಮೂಲಕ ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡ, ಕ್ಷೇತ್ರದ ಪ್ರಥಮ ಮಹಿಳಾ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಸದರಾದ ಮೊದಲ ದಿನ ಬೆಳಗ್ಗೆಯಿಂದ ರಾತ್ರಿವರೆಗೂ ಮನೆಗೆ ಬಂದವರ ಶುಭ ಹಾರೈಕೆಗಳ ಸಾಗರದಲ್ಲಿ ದಿನ ಕಳೆಯಬೇಕಾಯಿತು.
ಲೋಕಸಭಾ ಕ್ಷೇತ್ರ ಫಲಿತಾಂಶದಲ್ಲಿ ಎಲ್ಲ 19 ಸುತ್ತುಗಳಲ್ಲೂ ಬಹುತೇಕ ತಾವೇ ಮೇಲುಗೈ ಸಾಧಿಸಿ, ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ. ಇಡೀ ಕಾಂಗ್ರೆಸ್ ಪಾಳೆಯದಲ್ಲೇ ಮಿಂಚಿನ ಸಂಚಾರ ತಂದ ಡಾ.ಪ್ರಭಾ ಮಲ್ಲಿಕಾರ್ಜುನ ಈಗ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದ್ದಾರೆ.ತಮ್ಮ ನಿವಾಸ ಶಿವಪಾರ್ವತಿ ಬಳಿಗೆ ಬೆಳಗ್ಗೆಯಿಂದಲೇ ಕುಟುಂಬ ಸಮೇತರಾಗಿ ಬಂದ ಪಕ್ಷದ ಮುಖಂಡರು, ಕಾರ್ಯಕರ್ತರು, ಸಂಘ-ಸಂಸ್ಥೆಗಳು, ಅಧಿಕಾರಿ, ನೌಕರರು, ಬಾಪೂಜಿ ವಿದ್ಯಾಸಂಸ್ಥೆ ಅಧೀನದ ಅಂಗ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿ, ವೈದ್ಯರು, ವೈದ್ಯಕೀಯ ಪ್ರಾಧ್ಯಾಪಕರು, ಜನಪ್ರತಿನಿಧಿಗಳು, ಯುವ ಕಾರ್ಯಕರ್ತರು, ಮಹಿಳಾ ಮುಖಂಡರು, ಕಾರ್ಯಕರ್ತರು, ವಿವಿಧ ಸಮಾಜ, ಸಮುದಾಯಗಳ ಮುಖಂಡರು ಶುಭ ಕೋರಿದರು.
ಚುನಾವಣೆಯಲ್ಲಿ ಗೆದ್ದ ಸಂಭ್ರಮ ಇಡೀ ಜಿಲ್ಲಾದ್ಯಂತ ಮನೆ ಮಾಡಿತ್ತು. ಅಂತಹದ್ದರಲ್ಲಿ ಜಿಲ್ಲಾ ಕಾಂಗ್ರೆಸ್ಸಿನ ಶಕ್ತಿ ಕೇಂದ್ರವೇ ಆಗಿರುವ ಶಾಮನೂರು ನಿವಾಸದಲ್ಲಂತೂ ಫಲಿತಾಂಶ ಬಂದ ಕ್ಷಣದಿಂದಲೂ ಹಬ್ಬದ ವಾತಾವರಣ ಮನೆ ಮಾಡಿದೆ. ನೂತನ ಸಂಸದೆ ಡಾ.ಪ್ರಭಾ ಅವರಿಗೆ ಕ್ಷಣ ವಿಶ್ರಾಂತಿಗೂ ಬಿಡುವಿಲ್ಲದಂತೆ ಅಭಿಮಾನಿಗಳು, ಹಿತೈಷಿಗಳು, ಕಾರ್ಯಕರ್ತರು, ವಿವಿಧ ಊರಿನ ಜನರು ಹೂವಿನ ಹಾರ, ಹೂಗುಚ್ಛ, ನೆನಪಿನ ಕಾಣಿಕೆ, ದೇವರ ಬೆಳ್ಳಿ ವಿಗ್ರಹ ಮತ್ತಿತರ ಸ್ಮರಣಿಕೆಗಳನ್ನು ನೀಡಿ, ಅಭಿನಂದಿಸುತ್ತಿದ್ದರು.ಸಂಸದೆ ಡಾ.ಪ್ರಭಾ ಅವರನ್ನು ಅಭಿನಂದಿಸಲು ಬಂದವರು, ವಿಶ್ರಾಂತಿಯಲ್ಲಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿಯಾಗಿ, ಶುಭಾ ಹಾರೈಸಿ ಆಶೀರ್ವಾದ ಪಡೆಯುತ್ತಿದ್ದರು. ಶತಾಯಗತಾಯ ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಬಿಜೆಪಿಗೆ ವಿಶೇಷವಾಗಿ ತಮ್ಮ ರಾಜಕೀಯ ಬದ್ಧ ಎದುರಾಳಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರರ ಗೆಲುವಿನ ಸರಪಣಿ ತುಂಡರಿಸಲು 2 ತಿಂಗಳಿನಿಂದಲೂ ತಂತ್ರ ರೂಪಿಸಿದ್ದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಪ್ರಯತ್ನ ಯಶಸ್ವಿಯಾದ ಸಂಭ್ರಮದಲ್ಲಿದ್ದರು.
ಬೃಹತ್ ಹಾರಗಳು, ಸೆಲ್ಫೀ ಹಬ್ಬ:ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಅವರಿಗೆ ಹಾಕಲೆಂದೇ ವಿಶೇಷವಾಗಿ ದೊಡ್ಡ ದೊಡ್ಡ ಹಾರಗಳನ್ನು ಮಾಡಿಸಿಕೊಂಡು ತಂದು, ಕಾಯುತ್ತಾ ನಿಂತಿದ್ದರು. ಕಡೆಗೆ ಎಸ್.ಎಸ್.ಎಂ. ಬಂದ ನಂತರ ಡಾ.ಪ್ರಭಾ ಮಲ್ಲಿಕಾರ್ಜುನ, ಪುತ್ರ ಸಮರ್ಥ ಎಂ.ಶಾಮನೂರು ಸಮೇತ ಹಾರ ಹಾಕಿ, ಫೋಟೋ ತೆಗೆಸಿಕೊಂಡು, ಸೆಲ್ಫೀ ತೆಗೆದುಕೊಂಡು ಸೋಷಿಯಲ್ ಮೀಡಿಯಾ, ವಾಟ್ಸಪ್ ಗ್ರೂಪ್‌ಗಳಿಗೆ ಹಾಕಿಕೊಂಡು ಸಂಭ್ರಮಿಸಿದರು. ಬುಧವಾರ ತಡರಾತ್ರಿ ಸಹ ಡಾ.ಪ್ರಭಾ, ಮಲ್ಲಿಕಾರ್ಜುನ ದಂಪತಿ ತಮ್ಮ ಮನೆ ಅಂಗಳದಲ್ಲಿ ನಿಂತು, ಬಂದವರಿಗೆ ಕೃತಜ್ಞತೆ ಸಲ್ಲಿಸಿದರು.
ಶಾಮನೂರು ನಿವಾಸ ಶಿವ ಪಾರ್ವತಿ ಅಂಗಳ ಹಾಗೂ ಮುಂಭಾಗದ ಜಾಗದಲ್ಲೆಲ್ಲಾ ಜನಸಾಗರ, ಅಭಿಮಾನಿಗಳ ಮಹಾಪೂರ. ಈ ಕಾರಕ್ಕೆ ಪೊಲೀಸ್ ಇಲಾಖೆ ಹಾಗೂ ಪಕ್ಷದವರು ಸಾಕಷ್ಟು ಮುಂಜಾಗ್ರತೆ ವಹಿಸಿದ್ದರು. ವಾಹನಗಳ ಪಾರ್ಕಿಂಗ್‌ಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿದ್ದರೆ, ಜನದಟ್ಟಣೆ ತಡೆದು, ಸರಾಗವಾಗಿ ಜನರು ಸಾಗಲು ಅನುವಾಗುವಂತೆ ಮನೆ ಆವರಣದಲ್ಲಿ ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಲಾಗಿತ್ತು.- - - -(ಫೋಟೋ ಇದೆ)