ಸಾರಾಂಶ
ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಭಜನೆ ನಡೆಯಿತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇಲ್ಲಿಗೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವನಾಥ್ ಭಟ್ ಹಾಗೂ ವಾಮನ ಮೂರ್ತಿ ಭಟ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೊದಲಿಗೆ ಅರ್ಚಕರು ಬೆಳಗ್ಗೆ ದೇವತಾ ಪ್ರಾರ್ಥನೆ ಹಾಗೂ ಶ್ರೀ ಮಹಾಗಣಪತಿ ಹೋಮವನ್ನು ನೆರವೇರಿಸಿದರು. ದೇವಸ್ಥಾನದಲ್ಲಿರುವ ಗಣಪತಿ, ಶ್ರೀ ನಾಗ, ವನದುರ್ಗೆ ದೇವರಿಗೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಬೇಟೋಳಿ ಮಹಿಳಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ಜರುಗಿತು.
ಅರ್ಚಕರು ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪರ್ಚನೆ, ಭಸ್ಮಾರ್ಚನೆ, ತುಪ್ಪಾಭಿಷೇಕ, ಹಾಲಿನ ಅಭಿಷೇಕವನ್ನು ನೆರವೇರಿಸಿದರು. ಮಂಟಪದಲ್ಲಿ ಶ್ರೀ ಅಯ್ಯಪ್ಪ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆದು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಅಯ್ಯಪ್ಪ ವೃತಾಧಾರಿಗಳಿಂದ ಭಜನೆ, ಮತ್ತು ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಂಗಣದಲ್ಲಿ ಬೃಹತ್ ಎಲ್.ಇ.ಡಿ. ಪರದೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತಿ ಪ್ರಧಾನ ಚಲನಚಿತ್ರ ಮಾಳಿಕಪುರಂ ಪ್ರದರ್ಶಿಸಲಾಯಿತು.ಮಕರ ಜ್ಯೋತಿ ಪೂಜೆಯನ್ನು ಅತ್ಯಂತ ಭಕ್ತಿಯಿಂದ ನಡೆಸಲಾಯಿತು. ಅಯ್ಯಪ್ಪ ಸ್ವಾಮಿಗೆ ವಿಶೇಷ ಸೇವೆಗಳು ನಡೆದವು. ಮಹಾಮಂಗಳಾರತಿಯ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣಾ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು, ಸಮೀಪದ ಹೆಗ್ಗಳ, ಬೂದಿಮಾಳ, ಪೆರಂಬಾಡಿ, ಆರ್ಜಿ, ವಿರಾಜಪೇಟೆ, ಕೊಟ್ಟೋಳಿ, ತೋರ ಭಾಗದಿಂದ ಬಂದಂತಹ ಅತೀ ಹೆಚ್ಚಿನ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.