ರಾಜ್ಯ ಬಜೆಟ್ ನಲ್ಲಿ ಮಧ್ಯ ಕರ್ನಾಟಕಕ್ಕೆ ದ್ರೋಹ: ವಿಧಾನ ಪರಿಷತ್‌ ಸದಸ್ಯ ಕೆ.ಎಸ್.ನವೀನ್

| Published : Mar 03 2024, 01:35 AM IST

ರಾಜ್ಯ ಬಜೆಟ್ ನಲ್ಲಿ ಮಧ್ಯ ಕರ್ನಾಟಕಕ್ಕೆ ದ್ರೋಹ: ವಿಧಾನ ಪರಿಷತ್‌ ಸದಸ್ಯ ಕೆ.ಎಸ್.ನವೀನ್
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಮೇಲ್ದಂಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿ ಮಾತಿನಲ್ಲೂ ಕೇಂದ್ರ ಸರ್ಕಾರ 5,300 ಕೋಟಿ ರುಪಾಯಿ ಕೊಟ್ಟಿಲ್ಲವೆಂದು ಆಪಾದನೆ ಮಾಡಿದರು. ಆದರೆ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ. ಬಜೆಟ್‍ಲ್ಲಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಹಣ ಕಾಯ್ದಿರಿಸಿಲ್ಲ. ಕಾಂಗ್ರೆಸ್ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಂತ್ರಿಗಳು ಗಮನ ಹರಿಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಮಧ್ಯ ಕರ್ನಾಟಕದ ಚಿತ್ರದುರ್ಗಕ್ಕೆ ಮಹಾದ್ರೋಹ ಎಸಗಲಾಗಿದ್ದು, ಕಾಂಗ್ರೆಸ್ ನ ಯಾವ ಶಾಸಕರೂ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲವೆಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್.ನವೀನ್ ಆರೋಪಿಸಿದರು.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲೂ ಯಾರೂ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ. ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಮಂಡಲ ಸರಿಯಾದ ಉತ್ತರ ನೀಡದೇ ಬಿಲ್ಲುಗಳ ಪಾಸು ಮಾಡುವಲ್ಲಿ ನಿರತರಾಗಿದ್ದರು ಎಂದು ದೂರಿದರು.

ಭದ್ರಾ ಮೇಲ್ದಂಡೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿ ಮಾತಿನಲ್ಲೂ ಕೇಂದ್ರ ಸರ್ಕಾರ 5,300 ಕೋಟಿ ರುಪಾಯಿ ಕೊಟ್ಟಿಲ್ಲವೆಂದು ಆಪಾದನೆ ಮಾಡಿದರು. ಆದರೆ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ. ಬಜೆಟ್‍ಲ್ಲಿ ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಯಾವುದೇ ಹಣ ಕಾಯ್ದಿರಿಸಿಲ್ಲ. ಕಾಂಗ್ರೆಸ್ ಸರ್ಕಾರ ಚಿತ್ರದುರ್ಗ ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಂತ್ರಿಗಳು ಗಮನ ಹರಿಸುತ್ತಿಲ್ಲವೆಂದರು.

ಬಜೆಟ್ ಆಧಿವೇಶನದಲ್ಲಿ ಚಿತ್ರದುರ್ಗ ಜಿಲ್ಲೆಗೆ ಆಗಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಅವಕಾಶವನ್ನೇ ಕೊಡಲಿಲ್ಲ. ರಾಜ್ಯ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್ ನಲ್ಲಿ ₹2,700 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು. ಅದರಲ್ಲಿ ₹1400 ಕೋಟಿ ರು ಮಾತ್ರ ಕೊಟ್ಟಿದೆ. ಹಳೆಯ 1,300 ಕೋಟಿ ರು ಇನ್ನೂ ಬಾಕಿ ಇದೆ. ಆ ಹಣಮೊದಲು ಬಿಡುಗಡೆ ಮಾಡಲಿ. ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಬಹಿರಂಗ ಚರ್ಚೆಗೆ ಸ್ವಾಗತಿಸುತ್ತೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ನೀಡಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ನೀಡಿದ್ದೀರಿ ಎಂಬುದರ ಬಗ್ಗೆ ತಿಳಿಸಲಿ ಎಂದರು.

ಜಾಗ ಬೇರೆ ಇಲಾಖೆಗೆ ಹಂಚಿಕೆ:

ಕಳೆದ ಚುನಾವಣೆಯಲ್ಲಿ ಗೃಹ ಸಚಿವ ಅಮಿತ್ ಶಾ ರವರು ಚಳ್ಳಕೆರೆಗೆ ಆಗಮಿಸಿದಾಗ ಮದಕರಿ ಥೀಮ್ ಪಾರ್ಕ್ ಮಾಡುವುದಾಗಿ ಹೇಳಿದ್ದರು. ಆದರೆ ಕೋಟೆ ಸುತ್ತ ಇರುವ ಜಾಗ ಬೇರೆ ಬೇರೆ ಇಲಾಖೆಗೆ ಹಂಚಿಕೆಯಾಗಿದೆ. ಆದರೆ ಥೀಮ್ ಪಾರ್ಕ್ ಮಾಡಲು ಸುಮಾರು 40 ರಿಂದ 50 ಎಕರೆ ಜಾಗದ ಅವಶ್ಯಕತೆ ಇದೆ. ಈ ಪ್ರಯತ್ನ ಮುಂದುವರಿದಿದೆ ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಮತ್ತೊಮ್ಮೆ ಮೋದಿ ಪ್ರಧಾನಿ ಮಾಡಲು ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪುವ ಕೆಲಸ ನಡೆಯುತ್ತಿದೆ. ಬರುವ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಆಗಮಿಸಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಪೂರ್ವದಲ್ಲಿ ದೇಶಾದ್ಯಂತ ಒಂದನೇ ಹಂತದ ಪ್ರಚಾರ ಕಾರ್ಯಕ್ರಮ ಮುಗಿಸಿದ್ದೇವೆ. ರಾಜ್ಯದಲ್ಲಿ 28 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರದಾನ ಕಾರ್ಯದರ್ಶಿ ಸಂಪತ್ ಕುಮಾರ್, ವಕ್ತಾರ ದಗ್ಗೆ ಶಿವಪ್ರಕಾಶ್, ರಾಮದಾಸ್ ಸುದ್ದಿಗೋಷ್ಠಿಯಲ್ಲಿದ್ದರು.ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವನ ಬಂಧಿಸಿ ಎಂದರೆ ಎಫ್ಎಸ್ಎಲ್ ವರದಿ ಬರಲಿ ಎಂದು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಕೇವಲ ತನ್ನ ಮತ ಬ್ಯಾಂಕ್ ಕಾಯುವ ಕೆಲಸ ಮಾಡುತ್ತಿದೆ ಹೊರತು ರಾಜ್ಯದ ಜನತೆಯ ಹಿತವನ್ನು ನಿರ್ಲಕ್ಷಿಸಿದೆ.

ಕೆ.ಎಸ್.ನವೀನ್, ವಿಧಾನಪರಿಷತ್‌ ಸದಸ್ಯ