ಸಾರಾಂಶ
ಶಿವಮೊಗ್ಗ : ರಾಜ್ಯ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ (ಪರಿಶಿಷ್ಟ ಜಾತಿ ಉಪ ಯೋಜನೆ-ಬುಡಕಟ್ಟು ಉಪ ಯೋಜನೆ) ಅಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿರುವುದು ಈ ಸಮುದಾಯಗಳಿಗೆ ಮಾಡಿದ ದ್ರೋಹ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26ರ ಸಾಲಿನಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅಭಿವೃದ್ಧಿಗೆ ಒಟ್ಟು 42,017.51 ಕೋಟಿ ರು. ಅನುದಾನ ಒದಗಿಸಲಾಗಿದೆ. ಆದರೆ, ಈ ಪೈಕಿ 11,896.84 ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಬಳಸಲು ಮುಂದಾಗಿದೆ ಎಂದು ಆರೋಪಿಸಿದರು.ಈ ಹಿಂದೆಯೂ ಇದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿತ್ತು, ಆದರೆ ಈಗ ಮತ್ತೆ ಅದೇ ರೀತಿ ಹಣವನ್ನು ತೆಗೆದು ಮೋಸ ಮಾಡಲಾಗಿದೆ. ಗ್ಯಾರಂಟಿ ಯೋಜನೆಗೆ ನಾನು ವಿರೋಧ ವ್ಯಕ್ತಪಡಿಸಿವುದಿಲ್ಲ, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಒಳ್ಳೆಯದೇ, ಆದರೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅಭಿವೃದ್ಧಿಗೆ ಇಟ್ಟ ಹಣವನ್ನು ಈ ಯೋಜನೆಗೆ ಬಳಸುತ್ತಿರುವುದು ತಪ್ಪು ಎಂದರು.ರಾಜ್ಯ ಸರ್ಕಾರ ಹಿಂದಿನಿಂದಲೂ ‘ನಾವು ಹಿಂದುಳಿದ ವರ್ಗಗಳ ಪರ’ ಎಂದು ಹೇಳುತ್ತಾ ಬಂದಿದೆ. ಆದರೆ ಇಂದು ಅದೇ ಸರ್ಕಾರ ಹಿಂದುಳಿದ ವರ್ಗಗಳ ಹಣವನ್ನು ನುಂಗಿ ನೀರು ಕುಡಿಯುತ್ತಿದೆ. ಮುಖ್ಯಮಂತ್ರಿಗಳು ಈಗಾಗಲೇ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೂ ಅವರ ಕ್ಷೇತ್ರದ ಅಭಿವೃದ್ಧಿಗೆಂದು ತಲಾ 50 ಕೋಟಿ ರು. ಹಣ ನೀಡುವುದಾಗಿ ಹೇಳಿದ್ದಾರೆ. ಆ ಅಭಿವೃದ್ಧಿ ಕಾರ್ಯಗಳಿಗೆ ಪರಿಶಿಷ್ಟ ವರ್ಗಗಳ ಹಣವನ್ನು ಬಳಸಬಾರದು ಎಂದು ಹಾಗೇನಾದರೂ ಮಾಡಿದರೆ ಜನರು ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ದೈವಜ್ಞ ಸಮಾಜದ ಮುಖಂಡ ಗುರುರಾಜ್ ಎಂ.ಶೇಟ್, ವಿಶ್ವಾಸ್, ಬಾಲು ಮತ್ತಿತರರಿದ್ದರು.
ಮಧುಬಂಗಾರಪ್ಪಗೆ ಅಭಿನಂದನೆದೈವಜ್ಞ ಬ್ರಾಹ್ಮಣ ಸಮುದಾಯದ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ತಕ್ಷಣವೇ ಬಗೆಹರಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಎಂದು ಈಶ್ವರಪ್ಪ ಹೇಳಿದರು.ದೈವಜ್ಞ ಬ್ರಾಹ್ಮಣ ಸಮುದಾಯದವರು 2 ಎನಲ್ಲಿ ಮೊದಲಿನಿಂದಲೂ ಇದ್ದರು. ಆದರೆ ಅವರನ್ನು ಸಾಮಾನ್ಯವರ್ಗಕ್ಕೆ ಸೇರಿಸಲಾಗಿತ್ತು. ಇದರಿಂದ ಆ ಸಮುದಾಯದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಆ ಸಮುದಾಯದ ಮುಖಂಡರು ಬಂದು ನನಗೆ ತಿಳಿಸಿದರು. ನಾನು ತಕ್ಷಣವೇ ಸಂಬಂಧಪಟ್ಟ ಡಿಡಿಪಿಐ ಮತ್ತು ಇತರೆ ಅಧಿಕಾರಿಗಳಿಗೆ ತಿಳಿಸಿದೆ. ಮತ್ತು ಶಿಕ್ಷಣ ಸಚಿವ ಮಧುಬಂಗಾರಪ್ಪನವರಿಗೂ ವಿಷಯ ತಿಳಿಸಿದೆ. ಅವರು ನನಗೆ ತಕ್ಷಣವೇ ಸ್ಪಂದಿಸಿ, ಶಿಕ್ಷಣ ಆಯುಕ್ತರಿಗೆ ಹೇಳಿ, ಎರಡೇ ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದರು.